ಕುಡುದರಹಾಳ್ ಡಾ.ಶಿವಕುಮಾರ ತಾತ ಕಾರಂತ ರತ್ನಪ್ರಶಸ್ತಿಗೆ ಆಯ್ಕೆ.

ಬಳ್ಳಾರಿ:ಮಾ.26- ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕುಡುದರಹಾಳ್ ಗ್ರಾಮದ ರಂಗಭೂಮಿಯ ಹಿರಿಯ ಕಲಾವಿದ ಡಾ.ಶಿವಕುಮಾರ ತಾತನವರಿಗೆ ಸಿರುಗುಪ್ಪ ತಾಲೂಕಿನ ಬೈರಗಾಮದಿನ್ನೆಯ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ ಕೊಡ ಮಾಡುವ 2019 ರ ” ಕಾರಂತ ರತ್ನ’ ಪ್ರಶ್ತಿಗೆ ಆಯ್ಕೆಯಾಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಟಗೇರಿ ಗ್ರಾಮದ ಭದ್ರಣ್ಣ ಮತ್ತು ಪಾರ್ವತಮ್ಮರ ಮಗನಾಗಿ ಜನಿಸಿ,ಕುಡುದರಹಾಳಿನಲ್ಲಿ ವೈದ್ಯರಾಗಿ, ಧರ್ಮಗುರುಗಳಾಗಿರುವ ಇವರು ಎಲಿವಾಳ ಸಿದ್ಧಯ್ಯಸ್ವಾಮಿ, ಪಿ.ಬಿ.ದುತ್ತರಗಿ, ಬಿ.ವಿ.ಈಶ, ಚಿಂದೋಡಿ ಲೀಲಾರಂತಹ ರಂಗ ದಿಗ್ಗಜರ ಸಾಂಗತ್ಯದಿಂದಾಗಿ ರಂಗಭೂಮಿಯಲ್ಲಿ 10 ಕ್ಕೂ ಹೆಚ್ಚು ನಾಟಕಗಳನ್ನು ಬರೆದು, 80ಕ್ಕೂ ಹೆಚ್ಚು ನಾಟಕಗಳಲ್ಲಿ ಮತ್ತು ಗಾನಯೋಗಿ ಪಂಚಾಕ್ಷರಿ ಗವಾಯಿ, ವಠಾರ, ಅಣ್ಣ ಬಸವಣ್ಣ, ಬಾಂದವ್ಯ, ಮೂಕರಾಗ, ಈಶ್ವರ ಅಲ್ಲಾ ನೀನೇ ಎಲ್ಲಾ, ಜೀವ ಹೂವಾಗಿದೆ ಇನ್ನೂ ಮುಂತಾದ ಸಿನಿಮಾ,ಧಾರಾವಾಹಿಗಳಲ್ಲಿ ಅಭಿನಯಿಸಿ ನಾಡಿನ ಮನೆ ಮಾತಾಗಿದ್ದಾರೆ.
ಕೇವಲ ರಂಗಭೂಮಿಯೊಂದರಲ್ಲಿ ಅಲ್ಲದೇ, ಸಾಹಿತ್ಯ,ಸಂಗೀತ, ವೈದ್ಯಕೀಯ, ಆಧ್ಯಾತ್ಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಇವರಿಗೆ ನಾಳೆ ಕೊತ್ತಲಚಿಂತ ಗ್ರಾಮದ ಶ್ರೀ ಹನುಮಂತಾವಧೂತರ ಮಠದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ರಂಗ ಸಂಶೋಧಕ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ ಅವರ ರಚನೆ, ನಿರ್ದೇಶನದಲ್ಲಿ ಸ.ಕಿ.ಪ್ರಾ.ಶಾಲೆ, ಬಿ.ಜಿ.ದಿನ್ನೆ ಮಕ್ಕಳು ಅಭಿನಯಿಸುವ ” ಆಗೋದೆಲ್ಲಾ ಒಳ್ಳೆಯದಕ್ಕೆ ” ನಾಟಕ, ರಂಗ ಗೀತೆ ಗಾಯನ, ಜಾನಪದ ನೃತ್ಯ, ರಂಗ ಉಪನ್ಯಾಸ ಕಾರ್ಯಕ್ರಮ ಜರುಗಲಿವೆ.