ಕುಡುಕ ಪೀಡಕ ಪುತ್ರನನ್ನು ಗುಂಡಿಕ್ಕಿ ಕೊಂದ ತಂದೆ

ಬೆಂಗಳೂರು,ಜ.೨೬-ಮದ್ಯ ಸೇವನೆಗೆ ಹಣ ಕೊಡದೇ ರೂಂನಲ್ಲಿ ಕೂಡಿಹಾಕಿದ್ದರಿಂದ ಆಕ್ರೋಶಗೊಂಡ ತಂದೆ ಹೆತ್ತ ಮಗನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಅಮಾನುಷ ಘಟನೆ ಕಾಮಾಕ್ಷಿಪಾಳ್ಯದ ಒಂದನೇ ಮುಖ್ಯರಸ್ತೆಯ ಕರೆಕಲ್‌ನಲ್ಲಿ ನಡೆದಿದೆ.ಕರೆಕಲ್‌ನ ಪುತ್ರ ನರ್ತನ್ ಬೋಪಣ್ಣ (೩೨) ನನ್ನು ಪರವಾನಗಿ ಪಡೆದ ಎಸ್ ಬಿಬಿಎಲ್ ಶಾರ್ಟ್ ಗನ್ ನಿಂದ ಗುಂಡು ಹಾರಿಸಿ ಕೊಲೆಗೈದ ತಂದೆ ಸುರೇಶ್ ನನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.ಕೊಡಗು ಮೂಲದ ನಗರದ ಖಾಸಗಿ ಕಂಪನಿಯ ಉದ್ಯೋಗಿ ನರ್ತನ್ ಬೋಪಣ್ಣ ಕರೇಕಲ್‌ನ ಒಂದನೇ ಮುಖ್ಯರಸ್ತೆಯ ೨ನೇ ಕ್ರಾಸ್ ನ ಮನೆಯಲ್ಲಿ ತಂದೆ ಸುರೇಶ್ ಮತ್ತು ತಾಯಿ ಜತೆ ವಾಸವಾಗಿದ್ದರು.ಮನೆಯಲ್ಲಿ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು,ತಂದೆ ಸುರೇಶ್‌ಗೆ ಕುಡಿತದ ಚಟವನ್ನು ಅತಿಯಾಗಿ ಹಚ್ಚಿಕೊಂಡಿದ್ದು, ಇದೇ ಕಾರಣದಿಂದ ಅವರು ತಮ್ಮ ಮಗನನ್ನೇ ಕೊಲೆ ಮಾಡಿದ್ದಾರೆ.ಮನೆಯಲ್ಲೇ ಇರುತ್ತಿದ್ದ ಸುರೇಶ್ ಪತ್ನಿಯನ್ನೂ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಸದಾ ಕಾಲ ಮದ್ಯದ ಗುಂಗಿನಲ್ಲೇ ಇರುತ್ತಿದ್ದ ಆತ ಕುಡಿಯಲು ಹಣ ಬೇಕು ಎಂದು ಮಗನನ್ನು ಪೀಡಿಸುತ್ತಿದ್ದ.ಮನೆಗೆ ಮಗನಿಗೆ ನಿನ್ನೆ ಸಂಜೆಯೂ ಕುಡಿತಕ್ಕೆ ಹಣ ಕೇಳಿ ವಿಪರೀತ ಹಿಂಸೆ ನೀಡಿ ಹೊಡೆಯಲು ಬಂದಿದ್ದರು. ಇದನ್ನೆಲ್ಲ ನೋಡಿದ ನರ್ತನ್ ತನ್ನ ತಂದೆಯನ್ನು ಒಂದು ಕೋಣೆಯೊಳಗೆ ತಳ್ಳಿ ಬಾಗಿಲು ಹಾಕಿದ್ದರು. ಕೋಣೆಯ ಒಳಗಿದ್ದರೂ ಮಗನಿಗೆ ಕೂಗುತ್ತಾ ಬೆದರಿಕೆ ಹಾಕುತ್ತಿದ್ದರು.
ನೋಡೋಣ ಸ್ವಲ್ಪ ಹೊತ್ತು ಕಳೆದರೆ ಸರಿಯಾದೀತು ಎಂದು ನರ್ತನ್ ನಿರೀಕ್ಷಿಸಿದ್ದು,ಅದಕ್ಕೆ ತಕ್ಕಂತೆ ಸುರೇಶ್ ಒಳಗಿನಿಂದ ಸ್ವಲ್ಪ ತಣ್ಣಗಿದ್ದಂತೆ ಕಂಡಿತು. ಇತ್ತ ಒಳಗಿನಿಂದ ಸುರೇಶ್ ದೊಡ್ಡದೊಂದು ಕೃತ್ಯಕ್ಕೆ ಸಜ್ಜಾಗಿ ಮಗ ತನ್ನನ್ನು ಕೋಣೆಯೊಳಗೆ ಕೂಡಿ ಹಾಕಿದ್ದರಿಂದ ಸಿಟ್ಟಿಗೆದ್ದು ತಮ್ಮ ಬಳಿ ಇದ್ದ ಲೈಸೆನ್ಸ್ ಹೊಂದಿದ ಗನ್ ಹೊರಗೆ ತೆಗೆದು ಹೊರಗೆ ಚಿಲಕ ಕೋಣೆಯ ಬಾಗಿಲು ಒಡೆಯಲೆಂದು ಗುಂಡು ಹಾರಿಸಿದರು. ಹಾಗೆ ಹಾರಿಸಿದ ಗುಂಡು ಬಾಗಿಲನ್ನು ಒಡೆದುದಲ್ಲದೆ ನೇರವಾಗಿ ಹೊರಗೆ ಕುಳಿತಿದ್ದ ನರ್ತನ್ ಬೋಪಣ್ಣ ಅವರ ತೊಡೆಯ ಮೇಲ್ಭಾಗಕ್ಕೆ ಹೊಕ್ಕಿದೆ.ತೊಡೆಗೆ ಗುಂಡು ಹೊಕ್ಕುತ್ತಿದ್ದಂತೆಯೇ ನರ್ತನ್ ತನ್ನ ಸಹೋದರಿಗೆ ಕರೆ ಮಾಡಿ ತಂದೆ ನನ್ನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದು,ಕೂಡಲೇ ಸಹೋದರಿ ಸಂಬಂಧಿಕರೊಬ್ಬರನ್ನು ಮನೆ ಬಳಿ ಹೋಗುವಂತೆ ಹೇಳಿದ್ದರು. ಆದರೆ, ಅವರೆಲ್ಲ ಬಂದು ನೋಡಿದಾಗ ಸುಮಾರು ಮೂರು ಗಂಟೆ ಆಗಿತ್ತು.
ಅಷ್ಟೂ ಹೊತ್ತು ರಕ್ತ ಸ್ರಾವವಾಗಿ ನಿತ್ರಾಣಗೊಂಡಿದ್ದ ನರ್ತನ್ ಏಳುವ ಸ್ಥಿತಿಯಲ್ಲೇ ಇರಲಿಲ್ಲ. ಆ ಬಳಿಕ ಬಸವೇಶ್ವರನಗರದ ಸುಪ್ತ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸಾವನ್ನಪ್ಪಿದ್ದಾರೆ.ಇಷ್ಟೆಲ್ಲ ಆದರೂ ತಂದೆಯ ಕೋಪ ತಗ್ಗಿರಲಿಲ್ಲ. ಇತ್ತ ನರ್ತನ್ ತಾಯಿ ಅನಾರೋಗ್ಯದಿಂದ ಹಾಸಿಗೆಯಲ್ಲೇ ಅಸಹಾಯಕರಾಗಿ ಮಲಗಿದ್ದರು.
ಆರೋಪಿಯು ಕೃತ್ಯ ನಡೆದ ನಂತರ ಮನೆಯಲ್ಲಿ ರಕ್ತವನ್ನು ತೊಳೆದು ಸಾಕ್ಷ್ಯನಾಶ ಮಾಡಿದ್ದು,ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ
ಕಾಮಾಕ್ಷಿಪಾಳ್ಯ ಪೊಲೀಸ್ ಇನ್ಸ್ ಪೆಕ್ಟರ್ ನಾಗೇಶ್ ಧಾವಿಸಿ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿ ಎಸ್ ಬಿಬಿಎಲ್ ಗನ್ ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಗಿರೀಶ್ ತಿಳಿಸಿದರು.