ಕುಡಿವ ನೀರು, ಸ್ವಚ್ಛತೆ, ವಿದ್ಯುತ್ ದೀಪ ನಿರ್ಲಕ್ಷ್ಯಗೆ ಅಮಾನತು – ಎಚ್ಚರಿಕೆ

ಗ್ರಾ.ಪಂ.ಮೂಲಭೂತ ಸೌಕರ್ಯ, ಕಾಮಗಾರಿ – ಪ್ರಗತಿ ಪರಿಶೀಲನೆ ಸಭೆ
ರಾಯಚೂರು.ಸೆ.೦೨- ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿವ ನೀರು ಸ್ವಚ್ಛತೆ ಹಾಗೂ ಬೀದಿ ದೀಪ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸದಿದ್ದರೆ, ಆಯಾ ಗ್ರಾಮ ಪಂಚಾಯತಿಗಳ ಪಿಡಿಓಗಳನ್ನು ಅಮಾನತುಗೊಳಿಸುವ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ ಅವರು ಎಚ್ಚರಿಸಿದರು.
ಅವರಿಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗ್ರಾಮ ಪಂಚಾಯತ ಪಿಡಿಓಗಳ ಸಭೆ ನಡೆಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಂಜೂರಾದ ವಿವಿಧ ಯೋಜನೆಗಳು ಹಾಗೂ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲಿಸಿದರು. ಇಲ್ಲಿವರೆಗೆ ಆಯಾ ಗ್ರಾಮ ಪಂಚಾಯತ ಪಿಡಿಓಗಳು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಿರೊ ಆ ಬಗ್ಗೆ ನನಗೆ ಮುಖ್ಯವಲ್ಲ. ಮುಂಬರುವ ದಿನಗಳಲ್ಲಿ ನಿಗದಿತ ಕಾಮಗಾರಿಗಳ ಬಗ್ಗೆ ಎಚ್ಚರದಿಂದ ಮತ್ತು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸದಿದ್ದರೆ, ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಾಗುತ್ತದೆಂದು ಚಾಟಿ ಬೀಸಿದರು.
ಗ್ರಾ.ಪಂ. ಮಟ್ಟದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯುತ್ ದೀಪಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕುಡಿವ ನೀರು ಅತ್ಯಗತ್ಯವಾಗಿದ್ದರಿಂದ ಶುದ್ಧ ಕುಡಿವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಕೆಲ ಗ್ರಾ.ಪಂ.ವ್ಯಾಪ್ತಿಯಿಂದ ಪಿಡಿಓ ವಿರುದ್ಧ ದೂರು ಕೇಳಿ ಬಂದಿವೆ. ಜನರ ಮೂಲಭೂತ ಸೌಕರ್ಯ ನಿರ್ವಹಣೆಯಲ್ಲಿ ಜವಾಬ್ದಾರಿಯಿಂದ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿಲ್ಲವೆಂಬ ಮಾಹಿತಿ ಲಭ್ಯವಾಗಿದೆ. ಸಾರ್ವಜನಿಕರಿಗೆ ಜಿಲ್ಲಾ ಪಂಚಾಯತ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತ್ತು ಗ್ರಾಮಕ್ಕೆ ಬಿಡುಗಡೆಗೊಂಡ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ದೂರುಗಳು ತೀವ್ರವಾಗಿವೆ.
ಈ ಎಲ್ಲಾ ಸಮಸ್ಯೆಗಳನ್ನು ತಕ್ಷಣವೆ ಪರಿಹರಿಸಿಕೊಂಡು ಯಾವುದೇ ದೂರು ಇಲ್ಲದಂತೆ ಗ್ರಾಮಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಈ ಬಗ್ಗೆ ಮುಂಬರುವ ದಿನಗಳಲ್ಲಿ ಯಾವುದೇ ದೂರು ಬಂದರೂ, ಇದರ ಶಿಸ್ತು ಕ್ರಮಕ್ಕೆ ಅಧಿಕಾರಿಗಳು ಹೊಣೆಯಾಗಬೇಕಾಗುತ್ತದೆಂದು ಎಚ್ಚರಿಸಿದರು.
ಈ ಸಭೆಯಲ್ಲಿ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ಯೋಜನಾ ಅಧಿಕಾರಿ ರೋಣಿ, ಲೆಕ್ಕಾಧಿಕಾರಿ ನಾಗರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.