ಕುಡಿವ ನೀರು ನಿರ್ವಹಣೆಗೆ ಆಪ್, ಟ್ರೋಲ್ ಫ್ರೀ ನಂಬರ್ – ಶಾಸಕರು

ನಗರಸಭೆ : ನೂತನ ೬ ಟ್ರ್ಯಾಕ್ಟರ್ – ಸಣ್ಣ ಜೆಸಿಬಿ ಉದ್ಘಾಟನೆ
ರಾಯಚೂರು.ಜು.೨೧- ಸ್ವಚ್ಛತೆ, ಶುದ್ಧ ಕುಡಿವ ನೀರು ಹಾಗೂ ಘನತ್ಯಾಜ್ಯ ವಿಲೇವಾರಿ ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾರ್ವಜನಿಕ ಆಪ್ ಮತ್ತು ಕಾಲ್ ಸೆಂಟರ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರಿಂದು ನಗರಸಭೆಯಲ್ಲಿ ೬ ನೂತನ ಟ್ರ್ಯಾಕ್ಟರ್, ಚಿಕ್ಕ ಜೆಸಿಬಿ ಉದ್ಘಾಟಿಸಿ ಮಾತನಾಡಿದರು. ೨೪ ಘಂಟೆ ಅಧಿಕಾರಿಗಳು ಎಚ್ಚರದಿಂದ ಕಾರ್ಯ ನಿರ್ವಹಿಸುವಂತೆ ಈಗಾಗಲೇ ಸೂಚಿಸಲಾಗಿದೆ. ನಗರದಲ್ಲಿ ಸಾರ್ವಜನಿಕರಿಗೆ ಉತ್ತಮ ಮೂಲಭೂತ ಸೌಕರ್ಯ ಒದಗಿಸುವ ಪ್ರಕ್ರಿಯೆಗಳು ನಡೆಸಲಾಗುತ್ತದೆ. ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಕಸ ವಿಲೇವಾರಿಗೆ ಸಂಬಂಧಿಸಿ ಸಾರ್ವಜನಿಕರು ಸಮಯ ನಿಗದಿಗೊಳಿಸಿಕೊಳ್ಳಬೇಕು. ಮುಂಜಾನೆ ಮತ್ತು ರಾತ್ರಿ ಕಸ ಹೊರಗೆ ತಂದು ಹಾಕುವ ನಿಯಮ ಅನುಸರಿಸಿದರೆ, ಇದರಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅನುಕೂಲವಾಗುತ್ತದೆ.
ಎಲ್ಲಾ ಕೆಲಸ ಕಾರ್ಯಗಳನ್ನು ನಗರಸಭೆ ಮತ್ತು ಅಧಿಕಾರಿಗಳೆ ಮಾಡಬೇಕು ಎನ್ನುವ ರೀತಿಯಲ್ಲಿ ಸಾರ್ವಜನಿಕರು ಯೋಚಿಸದೆ, ಸ್ವಚ್ಛತೆ ವಿಷಯದಲ್ಲಿ ಸಾರ್ವಜನಿಕರು ಸಹಕರಿಸುವಂತಹ ಕೆಲಸ ಆಗಬೇಕು. ಪ್ರಸ್ತುತ ಶೇ.೭೦ ರಿಂದ ೮೦ ರಷ್ಟು ಸ್ವಚ್ಛತೆ ಸುಧಾರಣೆಗೊಂಡಿದೆ. ನಗರಸಭೆ ಸ್ಥಾಪನೆಗೊಂಡಾಗಿನಿಂದ ಇಂದಿನವರೆಗೂ ೬ ಟ್ರ್ಯಾಕ್ಟರ್, ೧ ಜೆಸಿಬಿ ಬಂದ ಉದಾಹರಣೆಗಳಿಲ್ಲ. ಮುಂಬರುವ ದಿನಗಳಲ್ಲಿ ರಾತ್ರಿ ವೇಳೆಯಲ್ಲೂ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುತ್ತದೆ.
ನಗರಸಭೆಗೆ ಈ ಹಿಂದೆ ಯಂತ್ರೋಪಕರಣಗಳ ಕೊರತೆ ಗಂಭೀರವಾಗಿತ್ತು. ಆದರೆ, ಈಗ ಈ ಪರಿಸ್ಥಿತಿ ಇಲ್ಲ. ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಯಂತ್ರೋಪಕರಣಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ನಗರವನ್ನು ಸ್ವಚ್ಛಗೊಳಿಸುವತ್ತ ಗಮನ ಹರಿಸಬೇಕಾಗಿದೆ. ಶುದ್ಧ ಕುಡಿವ ನೀರು, ಉತ್ತಮ ಪರಿಸರಕ್ಕೆ ಆದ್ಯತೆ ನೀಡಬೇಕು. ಪ್ರಸ್ತುತ ನಗರಸಭೆಯಲ್ಲಿ ೨೯ ಆಟೋ, ೬ ವಿದ್ಯುತ್ ಚಾಲಿತ ಆಟೋ ಸೇರಿದಂತೆ ಈಗ ಟ್ರ್ಯಾಕ್ಟರ್‌ಗಳು ಬಂದಿವೆ. ಈ ಎಲ್ಲಾ ಯಂತ್ರೋಪಕರಣಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಅವರು ಕೋರಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಳ, ಉಪಾಧ್ಯಕ್ಷರಾದ ನರಸಿಂಹಲು ಮಾಡಗಿರಿ, ಆಯುಕ್ತ ಕೆ.ಗುರುಲಿಂಗಪ್ಪ, ಕಡಗೋಳ ಆಂಜಿನೇಯ್ಯ, ನಗರಸಭೆ ಸದಸ್ಯರಾದ ಜಿಂದಪ್ಪ, ನಾಗರಾಜ, ಶಶಿರಾಜ, ವಿ.ನಾಗರಾಜ, ಸಣ್ಣ ನರಸರೆಡ್ಡಿ, ಎನ್.ಶ್ರೀನಿವಾಸ ರೆಡ್ಡಿ, ಯು.ನರಸರೆಡ್ಡಿ, ಹಾಜಿ, ಹರೀಶ್ ನಾಡಗೌಡ, ವಿಜಯರಾಜ ಮೂಥಾ, ಬೂದೆಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.