ಕುಡಿವ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮಕ್ಕೆ ಸೂಚನೆ

ಕೊರಟಗೆರೆ, ಏ. ೪- ರಾಜ್ಯದಲ್ಲಿ ಕೋವಿಡ್ ಸಮಸ್ಯೆ ಮರುಕಳಿಸಿದ್ದು, ಜನರನ್ನು ರೋಗದಿಂದ ರಕ್ಷಿಸುವ ಬಗ್ಗೆ ಮತ್ತು ಬೇಸಿಗೆ ಆರಂಭದಲ್ಲಿ ಕುಡಿಯುವ ನೀರಿನ ಆದ್ಯತೆಗೆ ತುರ್ತು ಸಭೆಯ್ನನು ಕರೆಯಲಾಗಿದೆ ಎಂದು ಶಾಸಕ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಈಗಾಗಲೇ ತಾಲ್ಲೂಕಿನಲ್ಲಿ ಕೋವಿಡ್ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಲು ಹಾಗೂ ಜನರಿಗೆ ಮನವರಿಕೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಜನರಿಗೆ ರೋಗ ನಿರೋಧಕ ಚುಚ್ಚು ಮದ್ದು ನೀಡಲು ಔಷಧಿ ಸಂಗ್ರಹಣೆಗೆ ಸೂಚಿಸಲಾಗಿದೆ ಎಂದರು.
ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ೧೫ನೇ ಹಣಕಾಸು ಯೋಜನಾ ಮೊತ್ತವನ್ನು ಕುಡಿಯುವ ನೀರಿಗೆ ಹೆಚ್ಚಾಗಿ ಬಳಸುವಂತೆ ಗ್ರಾಮ ಪಂಚಾಯತಿಗಳಿಗೆ ಆದೇಶಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಕ್ಷೇತ್ರದ ಪ್ರತಿ ಗ್ರಾಮಗಳಲ್ಲು ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ಮತ್ತು ನಿವೇಶನ, ವಸತಿ ಹೀನರಿಗೆ ಮನೆ ನಿರ್ಮಿಸಿ ಕೊಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದ್ದು ಅದಕ್ಕಾಗಿ ೧೮ ಗ್ರಾಮಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಜಮೀನುಗಳನ್ನು ಗುರುತಿಸಿ ಮನೆ ನಿರ್ಮಾಣಕ್ಕಾಗಿ ಇಂದು ಗುದ್ದಲಿ ಪೂಜೆಯನ್ನು ಮಾಡಲಾಯಿತು. ಕಾರ್ಯಕ್ರಮಗಳಲ್ಲಿ ಅತ್ಯಂತ ಸಂತಸ ಸುದ್ದಿ ಎಂದರೆ ೨೦೦೮ ರಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ಪ್ರಾರಂಭ ಮಾಡಿದ್ದ ಐಟಿಐ ಸಂಸ್ಥೆ ಇಂದು ಸ್ವಂತ ಕಟ್ಟಡದೊಂದಿಗೆ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕೌಶಲ್ಯ ತರಬೇತಿಯನ್ನು ಪಡೆಯುತ್ತಿದ್ದಾರೆ. ಇದು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ. ಹಿಂದಿನ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಸರ್ಕಾರದಲ್ಲಿ ಕೌಶಲ್ಯ ಅಭಿವೃದ್ದಿಗೆ ಹೆಚ್ಚಿನ ಮಹತ್ವ ನೀಡಿ ಅದಕ್ಕಾಗಿ ವಿಶೇಷ ನಿಗಮ ಮಂಡಳಿಯನ್ನೇ ರಚಿಸಲಾಯಿತು. ಅದೇ ರೀತಿಯಾಗಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರಾರಂಭಿಸಿದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಲವು ವಿದ್ಯಾರ್ಥಿನಿಯರ ಭವಿಷ್ಯ ರೂಪಿಸುತ್ತಿದ್ದು, ಇದರ ಮೂಲಭೂತ ಸೌಕರ್ಯಕ್ಕಾಗಿ ಅನುದಾನವನ್ನು ನೀಡಲಾಗುವುದು ಎಂದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಕಾರ್ಖಾನೆ ನಿರ್ಮಿಸಿ ಹಲವು ನಿರುದ್ಯೋಗ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ಆಕಾಂಕ್ಷೆ ಹೊಂದಲಾಗಿದ್ದರೂ ಕೈಗೂಡಲಿಲ್ಲ. ಅದಕ್ಕಾಗಿ ನಿರುದ್ಯೋಗ ನೀಗಿಸುವ ಮತ್ತೊಂದು ಯೋಜನೆಯಾಗಿ ಇಡೀ ರಾಜ್ಯದಲ್ಲೇ ಆರು ಕೇಂದ್ರಗಳಿಗೆ ಮಂಜೂರಾಗಿದ್ದ ಏಕಲವ್ಯ ವಸತಿ ಶಾಲೆಯನ್ನು ೨೦೧೩ ರಲ್ಲಿ ಬಜ್ಜನಹಳ್ಳಿಯಲ್ಲಿ ಪ್ರಾರಂಭಿಸಲಾಯಿತು. ಅದೇ ರೀತಿಯಾಗಿ ಕೋಳಾಲ ಮತ್ತು ಸಿದ್ದರಬೆಟ್ಟಗಳಲ್ಲಿ ಇಂದಿರಾ, ಅಂಬೇಡ್ಕರ್ ವಸತಿಶಾಲೆ ಸೇರಿದಂತೆ ಹಲವು ಕಡೆ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾವಂತರಾಗಿ ಉದ್ಯೋಗಸ್ತ ಯುವಕರಾಗಿ ಹೊರ ಹೊಮ್ಮುತ್ತಾರೆ ಎಂದರು.
ಈ ಸಂಧರ್ಭಗಳಲ್ಲಿ ತಾ.ಪಂ ಅಧ್ಯಕ್ಷ ರಾಮಯ್ಯ, ಉಪಾದ್ಯಕ್ಷ ವೆಂಕಟಪ್ಪ, ತಹಶೀಲ್ದಾರ್ ಗೋವಿಂದರಾಜು, ಇಒ ಶಿವಪ್ರಕಾಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು , ಗ್ರಾ.ಪಂ. ಅಧ್ಯಕ್ಷ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವಥನಾರಾಯಣ, ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್. ದಿನೇಶ್, ಯುವ ಅಧ್ಯಕ್ಷ ವಿನಯ್‌ಕುಮಾರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಪ.ಪಂ ಸದಸ್ಯರುಗಳಾದ ಎ.ಡಿ.ಬಲರಾಮಯ್ಯ, ಕೆ.ಆರ್ ಓಬಳರಾಜು, ನಾಗರಾಜು, ನಂದೀಶ್, ಮಾಜಿ ಉಪಾಧ್ಯಕ್ಷ ಕೆ.ವಿ. ಮಂಜುನಾಥ್, ಸದಸ್ಯ ಸೈಯದ್‌ಸೈಫುಲ್ಲಾ, ಮುಖಂಡರುಗಳಾದ ಹೆಚ್.ಎಂ. ರುದ್ರಪ್ರಸಾದ್, ಗಣೇಶ್, ಮಂಜುನಾಥ್, ಮುಕ್ತಿಯಾರ್ ಮತ್ತಿತರರು ಉಪಸ್ಥಿತರಿದ್ದರು.