ಕುಡಿವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲು ಸೂಚನೆ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.06: ಬೇಸಿಗೆ ಕಾಲದಲ್ಲಿ ಯಾವುದೇ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಉಪವಿಭಾಗ ಅಧಿಕಾರಿಗಳಾದ ಬಸವಣ್ಣೆಪ್ಪ ಕಲಶಟ್ಟಿ ಅವರು ಹೇಳಿದರು.
ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಆಯೋಜಿಸಿದ್ದ ಕುಡಿವ ನೀರು, ಬರಗಾಲ ನಿರ್ವಹಣೆ ಹಾಗೂ ಚುನಾವಣೆ ವಿಷಯಗಳ ಕುರಿತ ನಡೆದ ಸಭೆಯಲ್ಲಿ ಮಾತನಾಡಿದರು.
ಕಳೆದ ಎರಡ್ಮೂರು ವರ್ಷಗಳ ಹಿಂದೆ ಇದ್ದ ನೀರಿನ ತೊಂದರೆ ಈಗ ಇಲ್ಲ. ಆದರೂ ಮುಂದಿನ ಮೂರು ತಿಂಗಳ ವರೆಗೆ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು.ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ತ್ವರಿತವಾಗಿ ಪರ್ಯಾಯ ಕ್ರಮ ಕೈಗೊಳ್ಳಬೇಕು.  ನೀರಿಗಾಗಿ ಟ್ಯಾಂಕರ್ ಬಳಸಕೂಡದು, ಅಗತ್ಯ ಬಿದ್ದರೆ ಭೂ ಮಾಲೀಕರಿಂದ ಬೋರ್ ವೆಲ್ ಬಾಡಿಗೆ ಪಡೆಯಬೇಕು. ಇನ್ನೂ ಜಾನುವಾರುಗಳಿಗೆ ನೀರಿನ ಹಾಗೂ ಮೇವು ಸಮಸ್ಯೆ ಆಗದಂತೆ ಕ್ರಮವಹಿಸಬೇಕು ಎಂದರು.
ತಹಸೀಲ್ದಾರರಾದ ಮಂಜುನಾಥ ಅವರು ಮಾತನಾಡಿ, ತಾಲೂಕಿನ ವ್ಯಾಪ್ತಿಯಲ್ಲಿ 8 ಗ್ರಾಮಗಳು ನೀರಿನ ಸಮಸ್ಯಾತ್ಮಕ ಪಟ್ಟಿಯಲ್ಲಿವೆ. ವಿಠಲಾಪುರ, ಕಡೆಬಾಗಿಲು, ಹಂಪಸದುರ್ಗಾ, ಭಟ್ಟರನರಸಾಪುರ, ಶ್ರೀರಾಮನಗರ, ಚಿಕ್ಕಬೆಣಕಲ್ ಹಾಗೂ ಮರಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸವಣ್ಣ ಕ್ಯಾಂಪ್ ನಲ್ಲಿ ನೀರಿನ ಸಮಸ್ಯೆ ಇದೆ. ಆರ್ ಡಬ್ಲ್ಯುಎಸ್ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು.  ನಗರ ಪ್ರದೇಶದಲ್ಲಿ 15 ದಿನಕ್ಕೊಮ್ಮೆ ನೀರಿನ ಪರೀಕ್ಷೆ ಮಾಡಿಸಬೇಕು. ದುರಸ್ತಿ ಇರುವ ಆರ್ ಓ ಪ್ಲಾಂಟ್ ಗಳ ರಿಪೇರಿ ಮಾಡಿಸಿ ಜನರಿಗೆ ಶುದ್ಧ ಕುಡಿವ ನೀರು ಕಲ್ಪಿಸಬೇಕು ಎಂದು ಸೂಚಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ಅವರು ಮಾತನಾಡಿ, ಗ್ರಾಮೀಣ ಭಾಗದ ಎಲ್ಲ ಹಳ್ಳಿಗಳಲ್ಲಿರುವ ಕುಡಿವ ನೀರಿನ ಮೇಲ್ತೊಟ್ಟಿಗಳ ಸ್ವಚ್ಛತೆ ಮಾಡಬೇಕು. 15ನೇ ಹಣಕಾಸು ಯೋಜನೆ ಅನುದಾನದಡಿ ಕುಡಿವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಬೇಕು. ಪೈಪ್ ಲೈನ್ , ಮೋಟಾರ್ ರಿಪೇರಿ ಕೈಗೊಳ್ಳಬೇಕು ಎಂದರು.
ಈ ವೇಳೆ ನಗರಸಭೆ ಪೌರಾಯುಕ್ತರಾದ ವಿರೂಪಾಕ್ಷಮೂರ್ತಿ, ಕೃಷಿ ಇಲಾಖೆಮ ಕಂದಾಯ ಇಲಾಖೆ ಅಧಿಕಾರಿಗಳು, ತಾಲೂಕು ಪಂಚಾಯತ್ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.