ಕುಡಿವ ನೀರಿನ ಕೆರೆ ಮಳೆಗಾಲದಲ್ಲಿ ಬತ್ತಿತ್ತಲ್ಲ

ಲಿಂಗಸುಗೂರು.ಜು.೨೬- ಪುರಸಭೆ ವ್ಯಾಪ್ತಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಕಾಳಾಪುರದ ಕೆರೆ ಪುರಸಭೆ ಆಡಳಿತದ ದಿವ್ಯ ನಿರ್ಲಕ್ಷದಿಂದ ಬತ್ತಿ ಬರಿದಾಗಿದ್ದು ಮಳೆಗಾಲದಲ್ಲೂ ಎಂತಹ ಸ್ಥಿತಿ ಬಂದಿತಲ್ಲೋ ಎಂದು ನಾಗರೀಕರು ಆತಂಕಕೊಂಡಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲು ಹಲವು ದಶಕಗಳ ಹಿಂದೆ ಹತ್ತಾರು ಎಕರೆ ಪ್ರದೇಶದಲ್ಲಿ ಕಾಳಾಪುರದ ಹತ್ತಿರ ಅಂದಿನ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ರವರು ಶಾಸಕರಾಗಿದ್ದ ಸಂದರ್ಭದಲ್ಲಿ ಕೆರೆ ನಿರ್ಮಿಸಲಾಗಿತ್ತು. ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡ ಬಳಿಕ ಉದ್ಘಾಟನೆಗೆ ಅಂದು ಶಾಸಕ ಆಗಿನ ಮಾಜಿ ಕೇಂದ್ರ ಸಚಿವರ ಮದ್ಯೆ ಜಂಗಿ ಕುಸ್ತಿಯೇ ನಡೆದಿತ್ತು.
ಇತ್ತಿಚೀಗೆ ಶಾಸಕ ಡಿ.ಎಸ್ ಹೂಲಗೇರಿಯವರು ಶಾಸಕರಾಗಿದ್ದ ವೇಳೆ ಎರಡು ಸಲ ಕೆರೆಗೆ ನೀರಿನ ಕೊರತೆ ಉಂಟಾಗಿತ್ತು. ಆದರೆ ಶಾಸಕ ಹೂಲಗೇರಿ ಸಕಾಲಕ್ಕೆ ಎಚ್ಚೆತ್ತುಗೊಂಡು ಜನರ ಅನುಕೂಲಕ್ಕಾಗಿ ರಾಂಪೂರ ಏತ ನೀರಾವರಿ ಯೋಜನೆಯಿಂದ ಪ್ರತ್ಯೇಕ ನಾಲೆ ನಿರ್ಮಿಸಿ ಕುಡಿಯವ ನೀರಿನ ಸೌಲತ್ತು ಒದಗಿಸಿದ್ದರು.
ಪುರಸಭೆ ವ್ಯಾಪ್ತಿಯ ಲಿಂಗಸುಗೂರು ಪಟ್ಟಣ, ಕರಡಕಲ್, ಕಸಬಾಲಿಂಗಸುಗೂರು ಹಾಗೂ ಹುಲಿಗುಡ್ಡ ಗ್ರಾಮಗಳ ಒಳಗೊಂಡು ೨೩ ವಾರ್ಡುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ೫೦ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ನೀರು ಸಂಗ್ರಹ ಕೆರೆ ದಶಕಗಳ ಹಿಂದೆ ನಿರ್ಮಿಸಲಾಗಿದೆ. ಪಟ್ಟಣದ ಕಾಳಾಪುರ ರಸ್ತೆಯ ಪಕ್ಕದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡಿ ನೀರು ಶುದ್ದಿಕರಿಸಿ ನೀರು ಪೂರೈಕೆ ಮಾಡಲಾಗುತ್ತದೆ.
ಪುರಸಭೆ ಆಡಳಿತದ ನಿರ್ಲಕ್ಷದಿಂದ ಪಟ್ಟಣಕ್ಕೆ ಕುಡಿಯುವ ನೀರು ಸಂಗ್ರಹ ಕೆರೆಗೆ ಖಾಲಿಯಾಗಿದೆ. ಕೆರೆ ಖಾಲಿಯಾದಾಗ ನಾರಾಯಣಪುರ ಬಲದಂಡೆ ನಾಲೆ ಹಾಗೂ ಅನಾನುಕೂಲದಲ್ಲಿ ರಾಂಪೂರ ಏತ ನೀರಾವರಿ ಯೋಜನೆ ನಾಲೆಗಳಿಂದ ಕೆರೆ ತುಂಬಿಸಲಾಗುತ್ತದೆ. ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಖಾಲಿಯಾಗಿ ತಳ ಕಂಡಿದೆ.
ಪುರಸಭೆ ಆಡಳಿತದ ನಿರ್ಲಕ್ಷದಿಂದ ೫೦ ಸಾವಿರಕ್ಕೂ ಅಧಿಕ ಜನಸಂಖ್ಯೆಗೆ ನೀರು ಪೂರೈಕೆ ಮಾಡುವ ಕೆರೆ ಬರಿದಾಗಿದೆ.
ಇದೇ ೩೦ರ ಒಳಗೆ ಕೆರೆ ತುಂಬಿಸಿ ಪಟ್ಟಣಕ್ಕೆ ಸಮಪರ್ಕ ನೀರು ಪೂರೈಕೆ ಮಾಡಬೇಕು ಇಲ್ಲದಿದ್ದರೆ ಪಟ್ಟಣದ ನಾಗರೀಕರೊಂದಿಗೆ ಪುರಸಭೆಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಅಲ್ಲದೇ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ದೋರಣೆಯನ್ನು ಸಂಸದ ರಾಜಾ ಅಮರೇಶ್ವರ ನಾಯಕರ ಗಮನಕ್ಕೆ ತರುವ ಜೊತೆಗೆ ನಿರ್ಲಕ್ಷ ವಹಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮನವಿ ಮಾಡಲಾಗುವುದೆಂದು ಪಟ್ಟಣದ ಹಿರಿಯ ಮುಖಂಡ ಪುರಸಭೆ ಮಾಜಿ ಅಧ್ಯಕ್ಷ ಖಾದರ ಪಾಶ ಎಚ್ಚರಿಕೆ ನೀಡಿದರು.