ಕುಡಿಯುವ ನೀರು ಸರಬರಾಜು ಖಾಸಗಿ ಕಂಪನಿಗೆ ನೀಡುವುದನ್ನು ಕೈಬಿಡಲು ಎಸ್.ಯು.ಸಿ.ಐ.ಆಗ್ರಹ

ಕಲಬುರ್ಗಿ.ಮಾ.26 : ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಹಾನಗರಗಳಲ್ಲಿ ಕುಡಿಯುವ ನೀರು ಸರಬರಾಜು ನಿರ್ವಹಣೆಯನ್ನು ಇದೀಗ ಎಲ್ ಅಂಡ್ ಟಿ ಖಾಸಗಿ ಕಂಪನಿಗೆ ನೀಡುತ್ತಿರುವ ಕರ್ನಾಟಕ ರಾಜ್ಯ ಸರ್ಕಾರದ ಕ್ರಮವನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್.ಯು.ಸಿ.ಐ) ಖಂಡಿಸಿದೆ.
ಈಗಾಗಲೆ ಎರಡು ವಾರಗಳ ಹಿಂದೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರಗಳ ನೀರು ಸರಬರಾಜು ಜವಾಬ್ದಾರಿಯನ್ನು ಎಲ್ ಅಂಡ ಟಿ ಕಂಪನಿಗೆ ಹಸ್ತಾಂತರಿಸುವ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ. ಕುಡಿಯುವ ನೀರು ಒಂದು ಮೂಲಭೂತ ಅವಶ್ಯಕತೆಯಾಗಿದೆ. ಅದರ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವುದರಿಂದ ಖಾಸಗಿ ಕಂಪನಿಗಳು ತಮ್ಮ ಲಾಭಕ್ಕೋಸ್ಕರ ಕಾರ್ಯ ನಿರ್ವಹಿಸುತ್ತವೆಯೇ ಹೊರತು ಜನರ ಅವಶ್ಯಕತೆಗಳ ಬಗ್ಗೆ ಕಿಂಚಿತ್ತು ಆಲೋಚಿಸುವುದಿಲ್ಲ. ಜೀವನಾವಶ್ಯಕ ಕುಡಿಯುವ ನೀರಿನ ಸರಬರಾಜು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಖಾಸಗಿಯವರಿಗೆ ಹಸ್ತಾಂತರಿಸುವ ಮೂಲಕ ತನ್ನ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳುತ್ತಿದೆ. ಸರ್ಕಾರವು ಈ ಹಿಂದೆ ಸ್ಥಳೀಯ ಸಂಸ್ಥೆಗಳಿಂದ ನೀರಿನ ಸರಬರಾಜನ್ನು ಜಲಮಂಡಳಿಗೆ ಹಸ್ತಾಂತರಿಸಿದಾಗಲೇ ಜನರಿಗೆ ತಮ್ಮ ದೂರುಗಳನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಖಾಸಗಿಯವರ ಕೈಗೆ ನೀರು ಸರಬರಾಜು ನಿರ್ವಹಣೆ ಬಂದರೆ ಜನಸಾಮಾನ್ಯರು ತಮ್ಮ ದೂರುಗಳನ್ನು ಯಾರ ಬಳಿಗೆ ಒಯ್ಯಬೇಕಾಗುತ್ತದೆ?
ಈಗಾಗಲೇ ಕಲಬುರಗಿ ನಗರದಲ್ಲಿ 24*7 ಹೆಸರಿನಲ್ಲಿ ಪ್ರಾಯೋಗಿಕವಾಗಿ ಕೆಲವು ವಾರ್ಡ್‍ಗಳಲ್ಲಿ ಖಾಸಗಿಯವರಿಗೆ ನೀರಿನ ಸರಬರಾಜು ನೀಡಿರುವುದರಿಂದ ಜನತೆ ತೀವ್ರ ಸಂಕಷ್ಟಕ್ಕಿಡಾಗಿದ್ದಾರೆ. ಒಂದೆಡೆ ಸರಿಯಾಗಿ ನೀರು ಬರುತ್ತಿಲ್ಲ, ಮತ್ತೊಂದೆಡೆ ಅವೈಜ್ಞಾನಿಕ ಸಾವಿರಾರು ರೂಪಾಯಿಗಳ ನೀರಿನ ಬಿಲ್‍ಗಳಿಂದಾಗಿ ಜನತೆ ರೋಸಿಹೋಗಿದ್ದಾರೆ. ಹಿಂದೆ ಹಲವಾರು ಬಾರಿ ನೀರಿನ ಖಾಸಗಿಕಾರಣದ ವಿರುದ್ಧ ಪ್ರತಿಭಟನೆಗಳನ್ನು, ಸಮಾವೇಶಗಳನ್ನು ಮಾಡಲಾಗಿತ್ತು. ಹಾಗಾಗಿ ಸರ್ಕಾರದ ಕುಡಿಯುವ ನೀರಿನ ಖಾಸಗಿಕರಣದ ಯೋಜನೆ ನೆನೆಗುದಿಗೆ ಬಿದ್ದಿತ್ತು. ಆದರೆ ಏಕಾಏಕಿ ಈಗ ಎಲ್ ಅಂಡ್ ಟಿ ಕಂಪನಿಗೆ ಕುಡಿಯುವ ನೀರಿನ ಸರಬರಾಜಿನ ನಿರ್ವಹಣೆಯನ್ನು ನೀಡುತ್ತಿರುವುದು ಜನರನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿದಂತೆಯಾಗುತ್ತದೆ. .
ಆದ್ದರಿಂದ ಸರ್ಕಾರ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸರಬರಾಜಿನ ಖಾಸಗಿಕಾರಣ ಮಾಡಬಾರದು. ನೀರು ಸರಬರಾಜು ನಿರ್ವಹಣೆಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ್ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಲಬುರಗಿ ನಗರದ ಜನತೆಯನ್ನು ಸಂಘಟಿಸಿ ಬೃಹತ್ ಹೋರಾಟವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.