ಕುಡಿಯುವ ನೀರು ಸಮಸ್ಯೆಗೆ ತಕ್ಷಣ ಸ್ಪಂದಿಸುವ ಕೆಲಸ ಅಧಿಕಾರಿಗಳಿಂದಾಗಬೇಕು; ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ

ಸಂಜೆವಾಣಿ ವಾರ್ತೆ
   ದಾವಣಗೆರೆ, ಮಾ.೩೧:  ಬೇಸಿಗೆ ತಾಪಮಾನ ಹೆಚ್ಚಳವಾಗಿದ್ದು ಎಲ್ಲ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ನಿರೀಕ್ಷೆ ಇದ್ದು ತಕ್ಷಣ ಕುಡಿಯುವ ನೀರಿನ ಪೂರೈಕೆಗಾಗಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿಟ್ಟುಕೊಂಡು ಸಮಸ್ಯೆಯಾದ ಕಡೆ ತಕ್ಷಣವೇ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರಾದ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು.ಅವರು  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರು ಸರಬರಾಜು ಕುರಿತಂತೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ತಿಳಿಸಿದರು. ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಸಾಕಷ್ಟು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಕಾಲುವೆ ಮತ್ತು ನದಿಯಲ್ಲಿನ ನೀರು ಹರಿವು ಕಡಿಮೆಯಾಗಿದ್ದರಿಂದ ಸಮಸ್ಯೆಯಾಗಿದೆ. ಆದರೂ ಸಹ ನದಿಗೆ ಹಾಗೂ ಕಾಲುವೆಗೆ ನೀರು ಹರಿಸುವ ಮೂಲಕ ಮುಂದಿನ 1 ತಿಂಗಳ ಕಾಲ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜೊತೆಗೆ ಕೊಳವೆಬಾವಿಗಳ ಮೂಲಕವೂ ನೀರು ಪೂರೈಕೆ ಮಾಡಲಾಗುತ್ತದೆ. ಕೆಲವು ಕಡೆ ಕೊಳವೆಬಾವಿಗಳು ಬತ್ತಿ ಹೋಗಿವೆ, ಇನ್ನೂ ಕೆಲವು ಕಡೆ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಇಳಿಕೆಯಾದ ಕೊಳವೆಬಾವಿಗೆ ಸಿಂಗಲ್‍ಫೇಜ್ ಮೋಟಾರ್ ಪಂಪ್ ಅಳವಡಿಸುವ ಮೂಲಕ ನೀರನ್ನು ಪೂರೈಕೆ ಮಾಡಲು ತಿಳಿಸಿ ಗ್ರಾಮ ಪಂಚಾಯಿತಿಗಳಲ್ಲಿನ 15 ನೇ ಹಣಕಾಸು ಯೋಜನೆಯಡಿ ಹೊಸ ಸಿಂಗಲ್‍ಫೇಜ್ ಮೋಟಾರ್ ಖರೀದಿಸಲು ತಿಳಿಸಿದರು.ಖಾಸಗಿ ಕೊಳಬೆಬಾವಿ ಗುರುತಿಸಲು ಸೂಚನೆ; ಎಲ್ಲೆಲ್ಲಿ ನೀರಿನ ಸಮಸ್ಯೆ ಎದುರಾಗಿದೆ, ಅಂತಹ ಕಡೆ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಬಾಡಿಗೆ ಆಧಾರದ ಮೇಲೆ ಪಡೆಯಲು ಮುಂದಾಗಬೇಕು. ಆದರೆ ಹೆಚ್ಚು ಟ್ಯಾಂಕರ್‍ಗಳ ಮೇಲೆ ಅವಲಂಭಿತವಾಗಬಾರದು ಎಂದು ಎಚ್ಚರಿಕೆ ನೀಡಿದರು. ಪ್ರತಿ ದಿನ ಒಬ್ಬರಿಗೆ ಕನಿಷ್ಠ 55 ಲೀಟರ್ ನೀರು ಪೂರೈಕೆ ಮಾಡಬೇಕಾಗಿದೆ ಮತ್ತು ಜಾನುವಾರುಗಳಿಗೂ ನೀರು ಪೂರೈಕೆ ಮಾಡುವುದರಿಂದ ಬಾಡಿಗೆ ಕೊಳವೆಬಾವಿಗಳಿಂದ ನಿರ್ವಹಣೆ ಸುಲಭವಾಗಲಿದೆ ಎಂದರು.