ಕುಡಿಯುವ ನೀರು, ಮೇವಿಗೆ ಕೊರತೆ ಇಲ್ಲ: ಜಿಲ್ಲಾಧಿಕಾರಿ

ಧಾರವಾಡ,ಮಾ30: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅಧಿಕಾರಿಗಳು ಕ್ರಿಯಾಶೀಲರಾಗಿ, ಬರ ಪರಿಸ್ಥಿತಿಯನ್ನು ನಿಗಾ ವಹಿಸಿದ್ದು, ಯಾವುದೇ ಗ್ರಾಮ, ಪಟ್ಟಣಗಳಿಗೆ ಕುಡಿಯುವ ನೀರಿನ ಕೊರತೆ ಅಥವಾ ಜಾನುವಾರುಗಳಿಗೆ ಮೇವು ಪೂರೈಕೆಯಲ್ಲಿ ವ್ಯತ್ಯೆಯವಾಗಿಲ.್ಲ ಮುಂದಿನ ದಿನಗಳಲ್ಲಿಯೂ ಅಧಿಕಾರಿಗಳು ಈ ಕುರಿತು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಬರ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿ, ಮಾತನಾಡಿದರು.

ಜಿಲ್ಲೆಯಲ್ಲಿ ಜೂನ್ ವರೆಗೆ ಅಗತ್ಯವಿರುವಷ್ಟು ಮೇವು ದಾಸ್ತಾನು ಇದೆ. ರೈತರು ಸಹ ಮೇವು ಬಣವಿ ಹೊಂದಿದ್ದಾರೆ. ಆದರೂ ರೈತರಿಗೆ ಸರಕಾರದ ನೆರವು, ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ ಎಂಬುದನ್ನು ಮನವರಿಕೆ ಮಾಡಲಾಗಿದೆ. ಕೃಷಿ ಭೂಮಿ ರಹಿತರು ಮತ್ತು ಹೈನುಗಾರಿಕೆ ಮಾಡುವವರಿಗೂ ಅನುಕೂಲವಾಗಲೆಂದು ಜಿಲ್ಲೆಯ ವಿವಿಧೆಡೆ ಬೇಡಿಕೆಗೆ ಅನುಗುಣವಾಗಿ ಆರು ಸ್ಥಳಗಳಲ್ಲಿ ಮೇವು ಬ್ಯಾಂಕುಗಳನ್ನು ತೆರೆಯಲಾಗಿದೆ. ರೈತರಿಗೆ ಈ ಕುರಿತು ಮಾಹಿತಿ ನೀಡಿದ್ದು, ರೈತರು ಅಗತ್ಯವಿದ್ದಾಗ ಮೇವು ಬ್ಯಾಂಕಿನಿಂದ ನಿಯಮಾನುಸಾರ ಮೇವು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

ಜಾನುವಾರುಗಳ ಮೇವನ್ನು ಯಾರಿಗೂ ಬಲ್ಕ್ ಸರಬರಾಜು ಮಾಡುವುದಿಲ್ಲ. ವೈಯಕ್ತಿಕವಾಗಿ ರೈತರಿಗೆ ಮಾತ್ರ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ರೈತರಿಗೆ ಮೇವು ಬೇಕಾದಲ್ಲಿ ಆಯಾ ತಾಲೂಕಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರನ್ನು, ತಹಶೀಲ್ದಾರರನ್ನು ಅಥವಾ ತಾಲೂಕು ಆಡಳಿತ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ. ಈ ಕುರಿತು ಗ್ರಾಮ ಮಟ್ಟದಲ್ಲಿ ಪಂಚಾಯಿತಿಗಳ ಮೂಲಕ ಡಂಗುರ ಸಾರುವ ಮೂಲಕ ರೈತರಿಗೆ ಮಾಹಿತಿ ತಲುಪಿಸಬೇಕು ಎಂದು ಅವರು ಹೇಳಿದರು.

ಖಾಸಗಿ ಬೋರವೆಲ್ ಮೂಲಕ ಪ್ರಸಕ್ತವಾರದಲ್ಲಿ ಧಾರವಾಡ ತಾಲೂಕಿನ 10 ಗ್ರಾಮಗಳಿಗೆ 13 ಬೋರವೆಲ್‍ಗಳಿಂದ, ಅಳ್ನಾವರ ತಾಲೂಕಿನ 1 ಗ್ರಾಮಕ್ಕೆ 2 ಬೋರವೆಲ್‍ಗಳಿಂದ, ಹುಬ್ಬಳ್ಳಿ ತಾಲೂಕಿನ 3 ಗ್ರಾಮಗಳಿಗೆ 3 ಬೋರವೆಲ್‍ಗಳ ಮೂಲಕ ಮತ್ತು 1 ಗ್ರಾಮಕ್ಕೆ ಟ್ಯಾಂಕರ್ ಮೂಲಕ, ಕಲಘಟಗಿ ತಾಲೂಕಿನ 13 ಗ್ರಾಮಗಳಿಗೆ 27 ಬೋರವೆಲ್‍ಗಳಿಂದ ಹಾಗೂ ಕುಂದಗೋಳ ತಾಲೂಕಿನ 2 ಗ್ರಾಮಗಳಿಗೆ 2 ಬೋರವೆಲ್‍ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ ನವಲಗುಂದ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ.್ಲ ಒಟ್ಟಾರೆಯಾಗಿ ಈ ಹಿಂದೆ ಅಂದಾಜಿಸಿ, ಸಮಸ್ಯಾತ್ಮಕವಾಗಿ ಗುರುತಿಸಿದ್ದ 153 ಗ್ರಾಮಗಳಿಗೆ ಅಗತ್ಯವಿದ್ದಾಗ ತಕ್ಷಣ ನೀರು ಪೂರೈಕೆ ಮಾಡಲು ಆಯಾ ಗ್ರಾಮ ವ್ಯಾಪ್ತಿಯಲ್ಲಿರುವ 390 ಖಾಸಗಿ ಬೋರವೆಲ್‍ಗಳನ್ನು ಗುರುತಿಸಿ, ಬೋರವೆಲ್ ಮಾಲೀಕರಿಂದ ಒಪ್ಪಿಗೆ ಪತ್ರ ಸಹ ಪಡೆಯಲಾಗಿದೆ. ಈ ಕುರಿತು ಅಧಿಕಾರಿಗಳು ಗ್ರಾಮಸ್ಥರಿಗೆ ತೊಂದರೆ ಆಗದಂತೆ ನಿರಂತರ ಬೇಟಿ, ನಿಗಾವಹಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.

ಒಂದು ಗ್ರಾಮ ಒಂದು ಕರೆ ಯೋಜನೆ: ಬರಗಾಲ ಹಿನ್ನೆಲೆಯಲ್ಲಿ ನರೇಗಾ ಕೂಲಿ ನೀಡುವಾಗ ಒಂದು ಗ್ರಾಮ ಒಂದು ಕೆರೆ ಯೋಜನೆ ಮಾಡಿಕೊಂಡು ಆಯಾ ಗ್ರಾಮದ ಎಲ್ಲಾ ನರೇಗಾ ಕೂಲಿ ಕಾರ್ಮಿಕರಿಂದ ಅವರದ್ದೇ ಊರಿನ ಒಂದು ಕೆರೆಯನ್ನು ಸಮಗ್ರ ಅಭಿವೃದ್ಧಿ ಮಾಡಿ ಎಂದು ತಿಳಿಸಿದರು.

ಒಂದು ಗ್ರಾಮ ಒಂದು ಕೆರೆ ಮೂಲಕ ನೀರಿನ ಸಂರಕ್ಷಣೆ, ಕೆರೆ ರಕ್ಷಣೆಗೆ ಆಧ್ಯತೆ ನೀಡಿ ಅಂತಹ ಕೆರೆಗಳ ಒತ್ತುವರಿ ಆಗಿದ್ದಲ್ಲಿ ತಕ್ಷಣ ತೆರವುಗೊಳಿಸಿ, ಹದ್ದಬಸ್ತು ಮಾಡಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ರವಿ ಸಾಲಿಗೌಡರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಬಿ.ಎಸ್., ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.