ಕುಡಿಯುವ ನೀರು ಪೋಲಾಗದಂತೆ ಕಾಪಾಡಲು, ಗ್ರಾ. ಪಂ ಅಧಿಕಾರಿಗಳಿಗೆ ಶಾಸಕರ ಕಿವಿಮಾತು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಡಿ.28 :-  ಜಲಜೀವನ್ ಮಿಷನ್ ಯೋಜನೆ  ಅಡಿಯಲ್ಲಿ ಮನೆಮನೆಗೂ ತುಂಗಭದ್ರಾ ಜಲಾಶಯದಿಂದ ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡುವ ಕಾಮಗಾರಿ ಜರುಗುತ್ತಿದ್ದೂ ಯಾವುದೇ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ ಶುದ್ಧಕುಡಿಯುವ ನೀರನ್ನು ಪೋಲಾಗದಂತೆ ಗ್ರಾಮಪಂಚಾಯಿತಿ ಅಧಿಕಾರಿಗಳು  ಮುತುವರ್ಜಿ  ವಹಿಸಿ ನೀರಗಂಟಿ ಅವರನ್ನು ನೇಮಿಸುವಂತೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಕಿವಿ ಮಾತು ಹೇಳಿದರು.
ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳ ಸಭೆಯಲ್ಲಿ ಮಾತನಾಡುತ್ತಾ
ತಾಲೂಕಿನಲ್ಲಿ ನಡೆಯುವ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಶರವೇಗದಲ್ಲಿ ನಡೆಸುವ ಮೂಲಕ ಫೆಬ್ರವರಿ ಅಂತ್ಯದೊಳಗೆ ಮುಗಿಸಬೇಕು. ಗ್ರಾಮಗಳಲ್ಲಿ ನಡೆಯುವ ಕಾಮಗಾರಿಗೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒಗಳು ಸಹಕಾರ ನೀಡಬೇಕು.ಮಾರ್ಚ್ ವೇಳೆಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇರುವುದರಿಮದ ಜಲ ಜೀವನ ಮಿಷನ್ ಕಾಮಗಾರಿಯು ಯಾವುದೇ ಅಡ್ಡಿ,, ಆತಂಕವಾಗದಂತೆ  ಶೀಘ್ರವೇ ಸಾಕಾರಗೊಳ್ಳಬೇಕು. ತುಂಗಭದ್ರಾ ಜಲಾಶಯದಿಂದ ಸರಬರಾಜು ಆಗುವ ಶುದ್ಧ ಕುಡಿವ ನೀರು ಮನೆ ಮನೆಗೂ ತಲುಪಬೇಕು. ಅಲ್ಲದೆ ಯಾವುದೇ ಕಾರಣಕ್ಕೂ ಜೆಜೆಎಂ ಕಾಮಗಾರಿ ನಿಲ್ಲದಂತೆ ಜಾಗ್ರತೆ ವಹಿಸುವಂತೆ ತಿಳಿಸಿದರು.
ತಾಲೂಕಿನ ಹಾರಕಬಾವಿ ಗ್ರಾಪಂ ವ್ಯಾಪ್ತಿಯ ಬಿಷ್ಣಹಳ್ಳಿ ಹೊರವಲಯದಲ್ಲಿ 15-20 ಮನೆಗಳಿದ್ದು, ಅಲ್ಲಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ನಳ ಸಂಪರ್ಕ ಕಲ್ಪಿಸುವಂತೆ ಬೇಡಿಕೆಯಿದೆ. ಬಿಷ್ಣಹಳ್ಳಿಯು ಹಾರಕಬಾವಿ ಗ್ರಾಪಂ ವ್ಯಾಪ್ತಿಯಲ್ಲಿದ್ದರೆ, ಹೊರವಲಯದಲ್ಲಿ ಮನೆಗಳಿರುವ ವ್ಯಾಪ್ತಿಯು ಕಾನಹೊಸಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದೆ. ಈ ಬಗ್ಗೆ ಏನು ಮಾಡುವುದು ಗೊತ್ತಾಗುತ್ತಿಲ್ಲ ಎಂದು ಹಾರಕಬಾವಿ ಗ್ರಾಪಂ ಪಿಡಿಒ ಜುಮ್ಮೋಬನಹಳ್ಳಿ ವೀರಣ್ಣ ಶಾಸಕರಿಗೆ ತಿಳಿಸಿದರು. ಗ್ರಾಮದ ಹೊರವಲಯದಲ್ಲಿ 15-20 ಗುಂಪು ಮನೆಗಳಿದ್ದರೆ ಅಲ್ಲಿಗೆ ಜೆಜೆಎಂ ಯೋಜನೆಯಡಿ ನೀರು ಸರಬರಾಜು ಮಾಡಬೇಕೆಂದು ಗ್ರಾಮೀಣ ನೀರು ಸರಬರಾಜು ಅಧಿಕಾರಿಗಳಿಗೆ ಸೂಚಿಸಿದರು. ಕೆಲವು ಹಳ್ಳಿಗಳಲ್ಲಿ ನೀರನ್ನು ಹೆಚ್ಚಾಗಿ ವ್ಯಯವಾಗುತ್ತಿದ್ದರೂ ಅದರ ಕಂಟ್ರೋಲ್ ಮಾಡುವುದಿಲ್ಲ. ಜಲ ಜೀವನ್ ಮಿಷನ್ ಯೋಜನೆಯಲ್ಲಿ ನೀರು ಪೋಲು ಮಾಡುವುದಕ್ಕೆ ಅವಕಾಶವಿಲ್ಲ. ಈ ಬಗ್ಗೆ ಗ್ರಾಪಂ ಪಿಡಿಒಗಳು ನೀರುಗಂಟಿಗಳ ಮೂಲಕ ಅದನ್ನು ಕಂಟ್ರೋಲ್ ಮಾಡಲು ಸೂಚಿಸಬೇಕೆಂದು ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಎಇಇ ಪ್ರಸನ್ನ ತಿಳಿಸಿದರು. ಆಗ ಶಾಸಕರು ಮಾತನಾಡಿ, ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲು ಪಿಡಿಒಗಳು ಮುಂದಾಗಬೇಕು. ನೀರು ಅಮೂಲ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆಗೆ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಶಾಸಕರು ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು ಆಗ ಜೆಸ್ಕಾಂ ಅಧಿಕಾರಿಗಳು ಮಾತನಾಡಿ  ಸಮಸ್ಯೆ ಕಂಡುಬಂದಲ್ಲಿ ಆಯಾ ಗ್ರಾಮಪಂಚಾಯಿತಿಯಿಂದ ಒಂದು ಅರ್ಜಿ ನೀಡಿದಲ್ಲಿ ತಕ್ಷಣ   ಸ್ಪಂದಿಸುವುದಾಗಿ ತಿಳಿಸಿದರು. ಶಾಸಕರು ಮೂರು ಪ್ರತ್ಯೇಕ ಸಭೆ ನಡೆಸಿ ಅದರಲ್ಲಿ ಅಧಿಕಾರಿಗಳಿಗೆ  ಕ್ಷೇತ್ರದ ಏಳ್ಗೆಗೆ ಅಧಿಕಾರಿಗಳು ಸಾಥ್ ನೀಡುವಂತೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ತಾಪಂ ಇಒ ವೈ.ರವಿಕುಮಾರ್, ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಅಧಿಕಾಗಳು, ತಾಲೂಕಿನ ಗ್ರಾಪಂ ಪಿಡಿಒಗಳು, ತಾಪಂ ಸಿಬ್ಬಂದಿ ಇದ್ದರು. ನಂತರ ಜೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿಗಳ ಪ್ರತ್ಯೇಕ ಸಭೆಯನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ನಡೆಸಿದರು.