ಕುಡಿಯುವ ನೀರು ಪೂರೈಕೆ ಯೋಜನೆಗೆ ಭೂಮಿಪೂಜೆ ನೆರವೇರಿಸಿದ ಎಂ. ಬಿ. ಪಾಟೀಲ

ವಿಜಯಪುರ:ಮಾ.23: ಜಲಜೀವನ ಮಿಷನ್ ಯೋಜನೆಯಡಿ ಮನೆ- ಮನೆಗಳಿಗೆ ನಳದ ಮೂಲಕ ಕುಡಿಯುವ ನೀರು ಪೂರೈಕೆ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡುವಂತೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬರಟಗಿ ಎಲ್. ಟಿ. 5 ರಲ್ಲಿ ಬುಧವಾರ ನಡೆದ 8.10 ಕೋ. ವೆಚ್ಚದಲ್ಲಿ 14 ತಾಂಡಾ ಮತ್ತು ರೂ. 30 ಲಕ್ಷ ವೆಚ್ಚದಲ್ಲಿ ಒಂದು ವಸ್ತಿ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಜಲಸಂಪನ್ಮೂಲ ಸಚಿವನಾಗಿದ್ದಾಗ ರೂ. 500 ಕೋ. ಗೂ ಹೆಚ್ಚು ಅನುದಾನ ತಂದು ಬಬಲೇಶ್ವರ ಮತಕ್ಷೇತ್ರದ ಪ್ರತಿಯೊಂದು ಗ್ರಾಮ ಮತ್ತು ತಾಂಡಾಗಳಲ್ಲಿ ಸಿಸಿ ರಸ್ತೆ ಕಾಮಗಾರಿ ಮಾಡಿದ್ದೇನೆ. ಈಗ ಈ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮಾಡುವಾಗ ಈ ರಸ್ತೆಗಳಿಗೆ ಹಾನಿಯಾಗದಂತೆ ಕೆಲಸ ಮಾಡಬೇಕು. ಒಂದು ವೇಳೆ ಹಾನಿಯಾದರೆ, ಅವುಗಳನ್ನು ಮತ್ತೆ ದುರಸ್ಥಿ ಮಾಡಬೇಕು. ಒಟ್ಟಾರೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಸಾರ್ವಜನಿಕರೂ ಕೂಡ ಕಾಮಗಾರಿಗಳಿಗೆ ಸಹಕರಿಸಬೇಕು ಎಂದು ಅವರು ಹೇಳಿದರು.
ಈ ಭಾಗದಲ್ಲಿ ನೀರಾವರಿ ಮಾಡಿರುವುದರಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಗುಳೆ ಹೋಗುವುದು ತಪ್ಪಿದೆ. ಎಲ್ಲ ಕಡೆ ಸಮೃದ್ಧಿಯ ವಾತಾವರಣವಿದೆ. ಹೀಗಾಗಿ ಈಗ ಮನೆ- ಮನೆಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈ ಭಾಗದಲ್ಲಿ ಬಾಕಿ ಮತ್ತು ಹೊಸ ಕಾಮಗಾರಿಗಳನ್ನು ಮಾಡಲಾಗುವುದು ಎಂದು ಎಂ. ಬಿ. ಪಾಟೀಲ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗುರುಪಾದಗೌಡ ದಾಶ್ಯಾಳ, ಬಿ. ಜಿ. ಪಾಟೀಲ, ಸಿದ್ದನಗೌಡ ಪಾಟೀಲ, ಅಶೋಕ ನಾಯಕ, ಅರ್ಜುನ ರಾಠೋಡ, ಪದ್ದು ಚವ್ಹಾಣ, ವಾಮನ ಚವ್ಹಾಣ ಸೇರಿದಂತೆ ಎಲ್ಲ ಗ್ರಾಂ. ಪಂ. ಸದಸ್ಯರು, ಗ್ರಾಮದ ಮುಖಂಡರು, ಉಪಸ್ಥಿತರಿದ್ದರು.