
ರಾಮದುರ್ಗ, ಜ10- ಅಂತರಜಲ ಕುಸಿತದಿಂದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಸಾಧ್ಯವಿಲ್ಲ ಎನ್ನುವದನ್ನು ಅರಿತು ತಾಲೂಕಿನ ಪ್ರತಿ ಗ್ರಾಮಕ್ಕೂ ಮಲಪ್ರಭಾ ಜಲಾಶಯದಿಂದ ಕುಡಿಯುವ ನೀರು ಪೂರೈಕೆಗೆ ರೂ.350 ಕೋಟಿ ವೆಚ್ಚದ ಪ್ರಸ್ತಾವಣೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಮನೆ ಮನೆಗೆ ಗಂಗೆ ಯೋಜನೆಯಡಿ ತಾಲೂಕಿನ ಕಂಕನವಾಡಿಯಲ್ಲಿ ರೂ. 31.20 ಲಕ್ಷ ವೆಚ್ಚದಲ್ಲಿ, ಸುನ್ನಾಳ ರೂ. 60 ಲಕ್ಷ ವೆಚ್ಚದಲ್ಲಿ, ಸಂಗಮೇಶ್ವರ ನಗರ ರೂ. 29.25 ಲಕ್ಷ ವೆಚ್ಚದಲ್ಲಿ, ಪಿರನಗುಡಿ ರೂ. 34.65 ಲಕ್ಷ ವೆಚ್ಚದಲ್ಲಿ, ಉಮತಾರ ರೂ. 36.30 ಲಕ್ಷ ವೆಚ್ಚದಲ್ಲಿ ಮತ್ತು ಬಟಕುರ್ಕಿ ತಾಂಡಾ(ಚೇತನ ನಗರ)ದಲ್ಲಿ ರೂ. 24.30 ಲಕ್ಷ ವೆಚ್ಚದಲ್ಲಿ ಪ್ರತಿ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿಯೊಬ್ಬರಿಗೆ ಶುದ್ಧ ಕುಡಿಯುವ ನೀರು ನೀಡುವ ಉದ್ಧೇಶದಿಂದ ಕೇಂದ್ರ ಸರ್ಕಾರ ಮನೆ ಮನೆಗೆ ಗಂಗೆ ಯೋಜನೆಯಡಿ ಜಾರಿಗೆ ತಂದಿದ್ದು ಇದು ಕೇಂದ್ರದ ಜನಪರ ಕಾಳಜಿಯ ಯೋಜನೆ ಇದಾಗಿದೆ ಎಂದ ಹೇಳಿದರು.
ಶ್ರೀ ಧನಲಕ್ಷ್ಮೀ ಶುಗರ್ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ ಅಂತರ ಜಲ ಕುಸಿತದಿಂದಾಗಿ ಕ್ಯಾಲ್ಸಿಯಂಯುಕ್ತ ನೀರು ಬರುತ್ತಿದ್ದು ಶುದ್ಧ ಕುಡಿಯುವ ನೀರು ಲಭ್ಯತೆ ಬರುವ ದಿನಗಳಲ್ಲಿ ಕಷ್ಟಕರವಾಗಲಿದೆ ಇದನ್ನರಿತು ಕೇಂದ್ರದ ಯೋಜನೆಯಡಿ ಮಂಜೂರಾಗಿರುವ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಮತ್ತು ಮಿತವಾಗಿ ನೀರು ಬಳಸುವ ಮೂಲಕ ಮುಂದೆ ಎದುರಾಗಲಿರುವ ಸಂಕಷ್ಟ ಎದುರಿಸಲು ಸಜ್ಜಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಹನಮಾಪೂರದ ಹನಮಂತಪ್ಪ ಮಹಾರಾಜರು, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಶ್ರೀನಿವಾಸ ವಿಶ್ವಕರ್ಮ, ಗುತ್ತಿಗೆದಾರ ಮಲ್ಲಿಕಾರ್ಜುನ ಧುಪದ, ಬಾಲಪ್ಪ ಪಮ್ಮಾರ ಸೇರಿದಂತೆ ಎಲ್ಲ ಗ್ರಾಮಗಳ ನುತನ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರು ಇದ್ದರು.