ಕುಡಿಯುವ ನೀರು ಕೊರತೆ: ಮತದಾನ ಬಹಿಷ್ಕಾರದ ಎಚ್ಚರಿಕೆ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.26: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗು ಚಿಕ್ಕಮಾದಿನಾಳು ಗ್ರಾಮದ ಕೆಲ ದುಷ್ಕರ್ಮಿಗಳ ಕೃತ್ಯದಿಂದ ಚಿಕ್ಕಜಂತಕಲ್ ಗ್ರಾಮದ ಬಳಿಯ ತುಂಗಭದ್ರ ನದಿಯಿಂದ ತಾಲೂಕಿನ ವಿಠಲಾಪುರ ಕರೆಗೆ ಹರಿಯಬೇಕಿದ್ದು ನೀರು ಸ್ಥಗಿತಗೊಂಡಿದು,್ದ ಜನರಿಗೆ ಮತ್ತು ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ, ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ ಅದಕ್ಕಾಗಿ ವಿಠಲಾಪುರ ಸಮಸ್ತ ಪ್ರಜೆಗಳು ಮತದಾನ ಬಹಿಷಕರಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಗ್ರಾಮಸ್ಥ ಯಂಕೋಬ ದೊಡ್ಡಮನಿ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಗತಿಸಿ ಹಲವಾರು ದಶಕಗಿತಿಸಿದರೂ ಗ್ರಾಮಗಳಿಗೆ ಕುಡಿಯುವ ನೀರಿ ಸೌಕರ್ಯ ಕಲ್ಪಿಸದೆ ಜನಪ್ರತಿನಿಧಿಗಳು ಅಸಡ್ಡೆ ತೋರುತ್ತಿದ್ದಾರೆ. ಎರಡು ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ರೂಪಸಿ ಅದಕ್ಕೆ ಸಂಬಂಧ ಪಟ್ಟಂತೆ ಅರೆಬರೆ ಕಾಮಗಾರಿ ನಿರ್ವಹಿಸಿ ಹಣ ಎತ್ತುವಳಿ ಮಾಡಿದ್ದು, ಅಧಿಕಾರಿಗಳು, ಗುತ್ತಿಗೆದಾರರು ಶಾಮೀಲಾಗಿದ್ದಾರೆ, ಚಿಕ್ಕಮಾದಿನಾಳ್ ಗ್ರಾಮದ ಕೆಲ ರೈತರು ಪೈಪ್ ಜಾಕ್ ವೇಲೆ ಹಾಕಿ ನೀರನ್ನು ಗದ್ದೆಗೆ ಹರಿಸಿಕೊಳ್ಳುತ್ತಿದ್ದರು, ಇದನ್ನು ಪ್ರಶ್ನಿಸಿದ್ದಕ್ಕೆ ಜೆಸಿಬಿ ಮೂಲಕ ಹಾಕಿದ್ದ ಪೈಪ್ ಲೈನ್ ಕಿತ್ತು, ವಿಠಲಾಪುರ ಗ್ರಾಮಕ್ಕೆ ನೀರು ತಲುಪದಂತೆ ದುಷ್ಕೃತ್ಯ ಎಸಗುತ್ತಿದ್ದಾರೆ ಎಂದು ಕಿಡಿಕಾರಿದರು.
ಪೈಪ್ ಲೈನ್ ಒಡೆದವರ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದರು ದೂರು ಸ್ವೀಕರಿಸದೆ ರೈತರಿಗೆ ಅವಾಜ್ ಹಾಕಿ ಕಳುಹುತಿದ್ದು, ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಎಲ್ಲಿ ಹೋದರೂ ಸೂಕ್ತ ನ್ಯಾಯ ಸಿಗದೆ ಕಂಗಾಲಾಗಿದ್ದೇವೆ, ಬಿರು ಬೇಸಿಗೆಯಲ್ಲಿ ನೀರಿನ ಟ್ಯಾಂಕರ್ ಮೂಲಕ ತರಿಸಿಕೊಂಡು ಅಲ್ಪಸ್ವಲ್ಪ ನೀರು ಬಳಸಿಕೊಂಡು ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾನವಾಗಿದೆ ಹೀಗೆ ಮುಂದುವರೆದರೆ ಮತದಾನ ಬಹಿಷ್ಕಾರದ ಜತೆಗೆ ಹೆದ್ದಾರಿಯಲ್ಲಿ ರಸ್ತೆ ತಡೆದು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ, ಸರಕಾರದ ಅನುದಾನ ಪೋಲಾಗುತ್ತಿರುವುದರ ಜತೆಗೆ ಗ್ರಾಮದ ಜನತೆಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ, ಕೊಪ್ಪಳ ಜಿಲ್ಲಾಧಿಕಾರಿಗಳು ಒಮ್ಮೆ ವಿಠಲಾಪುರ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಗ್ರಾಮದಲ್ಲಿನ ಜನರ ತೊಂದರೆ ಅರಿಯಲಿ ಶೀಘ್ರ ಕ್ರಮ ಕೈಗೊಳ್ಳಲಿ ಎಂದು ದೊಡ್ಡಮನಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಗರಪ್ಪ ಜಲ್ಲಿ, ನಾಗರಾಜ್ ಹೊಸಗುಡ್ಡ, ಯಂಕೋಬ ಯಾದವ್, ದೊಡ್ಡಬಸಪ್ಪ ಮರಳಿ, ರಾಮಣ್ಣ ನೆಲ್ ಜರಿ, ಯಮನೂರಪ್ಪ ನಾಯಕ, ಪಂಪಾಪತಿ ತಳವಾರ, ಯಮನೂರಪ್ಪ ವೆಂಕಟಗಿರಿ, ಹನುಮಂತಪ್ಪ ಹೆರೂರ್, ರಾಮಣ್ಣ ಪಚ್ಚಿ, ದುರುಗೇಶ್ ಮಾಲಿಪಾಟೀಲ್ ಇತರರಿದ್ದರು.