ಕುಡಿಯುವ ನೀರಿನ ಸಮಸ್ಯೆ, ಸಾಂಕ್ರಾಮಿಕ ರೋಗ ತಡೆಗೆ ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೧೯; ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾ ಸಪ್ತಾಹ, ಕುಡಿಯುವ ನೀರಿನ ಸಮಸ್ಯೆ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ವಿಶೇಷ ಗ್ರಾಮಸಭೆಗಳನ್ನು ಆಯೋಜಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.  ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ಸ್ವಚ್ಛತಾ ಸಪ್ತಾಹ, ಕುಡಿಯುವ ನೀರಿನ ಸಮಸ್ಯೆ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಕೈಗೊಳ್ಳುವ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಜನಜಾಗೃತಿ ಸಪ್ತಾಹದ ಅಂಗವಾಗಿ ವೈಯಕ್ತಿಕ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಹಾಗೂ ಪರಿಸರ ನೈರ್ಮಲ್ಯದ ನಿರ್ವಹಣೆ ಕುರಿತು ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಿ, ಗ್ರಾಮಗಳ ಮುಖಂಡರುಗಳಿಗೆ, ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಹಾಗೂ ನೈರ್ಮಲ್ಯದ ಕುರಿತು ಅರಿವು ಮೂಡಿಸಬೇಕು.  ಜನರು ಕಾಯಿಸಿ ಆರಿಸಿದ ನೀರನ್ನು ಕುಡಿಯಲು ಉಪಯೋಗಿಸಬೇಕು ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡುವಂತೆ ಸೂಚನೆ ನೀಡಿದರು. ಕುಡಿಯುವ ನೀರಿನ  ಮೂಲಗಳಿಂದ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಮಾದರಿಗಳನ್ನು ನಿರಂತರವಾಗಿ ಸಂಗ್ರಹಿಸಿ, ಪರೀಕ್ಷಿಸಿ, ಕಲುಷಿತವಾಗಿರುವ ಮೂಲಗಳನ್ನು ತಕ್ಷಣ ಕ್ಲೋರಿನೇಷನ್ ಮಾಡಿಸಬೇಕು. ಶುದ್ಧ ಕುಡಿಯುವ ನೀರು ಹಾಗೂ ಸಮರ್ಪಕ ನೈರ್ಮಲ್ಯ ನಿರ್ವಹಣೆಯಲ್ಲಿ ಅಗತ್ಯವಿರುವ ದುರಸ್ಥಿ ಕಾರ್ಯಗಳನ್ನು ಪೂರ್ವಭಾವಿಯಾಗಿ ಗುರುತಿಸಿ ಸರಿಪಡಿಸಬೇಕು. ನೀರು ಸಂಗ್ರಹಿಸುವ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸಿ ನೀರು ಶೇಖರಿಸುವಂತೆ ತಾಕೀತು ಮಾಡಿದರು.ಕುಡಿಯುವ ನೀರು ಕಲುಷಿತವಾಗದಂತೆ ಪೂರೈಕೆ ವ್ಯವಸ್ಥೆಯಲ್ಲಿ ಸೋರುವಿಕೆಗಳನ್ನು ಗುರುತಿಸಿ ತಕ್ಷಣ ದುರಸ್ಥಿಗೊಳಿಸುವುದು. ಗ್ರಾಮದಲ್ಲಿ ನೈರ್ಮಲ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದು. ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಅನುಪಸ್ಥಿತಿಯಲ್ಲಿ ಕ್ಲೋರಿನೇಷನ್ ಕಾರ್ಯ ಕೈಗೊಳ್ಳಬೇಕು. ಈ ಕುರಿತು ತುರ್ತಾಗಿ ಕ್ರಮವಹಿಸಿ ವಾರದೊಳಗೆ ವರದಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ, ಗ್ರಾಮೀಣ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಎಂಜಿನಿಯರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಾಶೀ ಹಾಗೂ ಆರು ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ನೀರು ಸರಬರಾಜು ಸಹಾಯಕ ನಿರ್ವಾಹಕ ಅಧಿಕಾರಿಗಳು ಇದ್ದರು.