ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮಕ್ಕೆ ಸಚಿವರ ಸೂಚನೆ

ತುಮಕೂರು, ಜು. ೧- ಜಿಲ್ಲೆಯ ೧೦ ತಾಲ್ಲೂಕುಗಳಲ್ಲೂ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಾದ್ಯಂತ ಸದ್ಯಕ್ಕೆ ಮಳೆ ಕೊರತೆ ಎದುರಾಗಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರುವ ಸಾಧ್ಯತೆ ಇದೆ. ಆದ್ದರಿಂದ ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೆ ಕುಡಿಯುವ ನೀರು ಒದಗಿಸುವ ಕಾರ್ಯಕ್ಕೆ ಆದ್ಯತೆ ನೀಡಿ ಕೆಲಸ ಮಾಡಬೇಕು ಎಂದು ಅವರು ತಾಕೀತು ಮಾಡಿದರು.
ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ೪ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ೧೦ ತಾಲ್ಲೂಕುಗಳಿಗೂ ಕುಡಿಯುವ ನೀರು ಒದಗಿಸಲು ಯಾವುದೇ ರೀತಿಯ ಹಣದ ಕೊರತೆಯಿಲ್ಲ. ಯಾವುದಾದರೂ ಒಂದು ಯೋಜನೆಯಿಂದ ಒದಗಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳಿಗೆ ತುರ್ತಾಗಿ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕುಡಿಯುವ ನೀರು ಒದಗಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಶಾಸಕರ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿ ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ೧೦ ತಾಲ್ಲೂಕುಗಳ ತಾ.ಪಂ. ಇಓಗಳು ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಗಮನ ಹರಿಸಿ ಕಾರ್ಯೋನ್ಮುಖರಾಗಬೇಕು ಎಂದರು.
ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳಿಗೆ ಪಕ್ಕದ ಗ್ರಾಮದ ಬೋರ್‌ವೆಲ್‌ಗಳಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ. ನಂತರ ಆ ಗ್ರಾಮಗಳಿಗೆ ಶಾಶ್ವತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿ.ಪಂ. ಸಿಇಓ ಪ್ರಭು ಜೆ. ಅವರು ಸಭೆಗೆ ಮಾಹಿತಿ ನೀಡಿದರು.
ಇದಕ್ಕೂ ಮುನ್ನ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ಗೊಲ್ಲರಹಟ್ಟಿ ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡದೆ ಕಚೇರಿಗಳಲ್ಲೇ ಕುಳಿತು ಕಾರ್ಯನಿರ್ವಹಿಸುತ್ತಾರೆ ಎಂದು ಗುಡುಗಿದರು.
ಆಗ ಸಚಿವ ಪರಮೇಶ್ವರ್ ಅವರು ತುರುವೇಕೆರೆ ತಾ.ಪಂ. ಇಓ ಕರೆಸಿ ಸಭೆಗೆ ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳ ಮಾಹಿತಿ ನೀಡುವಂತೆ ಸೂಚಿಸಿದರು.
ಇಓಗೆ ತರಾಟೆ
ಸಭೆಗೆ ತುರುವೇಕೆರೆ ತಾಲ್ಲೂಕಿನ ಹಳ್ಳಿಗಳಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಮಾಹಿತಿಯನ್ನು ಸಮರ್ಪಕವಾಗಿ ನೀಡದ ತಾ.ಪಂ. ಇಒ ಅವರನ್ನು ಸಚಿವರು, ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು.
ಕೆಡಿಪಿ ಸಭೆಗೆ ತಾಲ್ಲೂಕಿನಲ್ಲಿ ಎರಡು ಹಳ್ಳಿಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಆಗಿದೆ ಎಂದು ಸಭೆಗೆ ತಪ್ಪು ಮಾಹಿತಿ ನೀಡಿದ್ದರಿಂದ ಕುಪಿತಗೊಂಡ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಇಒ ಅವರನ್ನು ಹಳ್ಳಿಗೆ ಹೋಗ್ತೀರೇನ್ರಿ, ನಿಮಗೆ ಸರ್ಕಾರ ಜೀಪು ಕೊಟ್ಟಿದೆ, ಹಳ್ಳಿಗಳಿಗೆ ಹೋಗಿ ಕೆಲಸ ಮಾಡೋಕೆ ಏನ್ರೀ ಆಗಿದೆ.. ಹಳ್ಳಿ ಜನ ಕುಡಿಯೋಕೆ ನೀರಿಲ್ಲ ಅಂತ ಸಾಯ್ಬೇಕಾ? ನೀನು ಹಳ್ಳಿಗೆ ಹೋಗಲ್ಲ ಆಫೀಸ್ ನಲ್ಲಿ ಕುಂತ್ಕೊಂತೀಯಾ ಎಂದು ಹರಿಹಾಯ್ದರು.
ಸಿಇಒ ಗೆ ಒಂದು ಲೆಕ್ಕ, ನಮಗೆ ಒಂದು ಲೆಕ್ಕ ಹೇಳ್ತೀರಾ? ಶಾಸಕರಿಗೆ ಸಮಸ್ಯೆ ಗೊತ್ತಿದೆ, ಶಾಸಕರು ಹೇಳ್ತಾರೆ ಕೇಳಿ? ಕುಡಿಯುವ ನೀರನ್ನು ಎಲ್ಲಿಂದ ಪೂರೈಸುತ್ತಿದ್ದಾರೆ ಹೇಳ್ರಿ? ಗೊಲ್ಲರಹಟ್ಟಿಯಲ್ಲಿ ಹುಟ್ಟಿದ್ದರೆ ನಿನಗೆ ಗೊತ್ತಾಗೋದು, ಕುಡಿಯುವ ನೀರಿಗೆ ಗಲಾಟೆ ಆಗ್ತಿದೆ, ಬೋರ್ ವೆಲ್ ಕೊರೆಸೋಕೆ ಏನ್ರಿ ರೋಗ ಎಂದರು.
ಇಒಗಳಿಗೆ ಮೀಟಿಂಗ್ ನಲ್ಲಿ ಏನು ಹೇಳೋದಿಲ್ಲ, ಊರೊಳಗೆ ಕರ್ಕೊಂಡು ಕಟ್ಟಿ ಹಾಕಬೇಕು, ಯಾವ ಊರಲ್ಲಿ ನೀರಿಲ್ಲ, ನೀರು ಒದಗಿಸಲು ಕ್ರಮ ಕೈಗೊಂಡಿದ್ದೀರಾ ಹೇಳಿ ಅಂದ್ರೆ ಕಥೆ ಹೇಳ್ತೀರಾ ಎಂದು ಸಚಿವ ಕೆ.ಎನ್.ರಾಜಣ್ಣ ಗುಡುಗಿದರು.
ಯಾವುದೇ ಕಾರಣಕ್ಕೂ ಜಿಲ್ಲೆಯ ೧೦ ತಾಲ್ಲೂಕುಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರುಗಳು ಬರದಂತೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.
ಜೆಜೆಎಂ ಗುಣಮಟ್ಟದ ಕಾಮಗಾರಿಗೆ ಸೂಚನೆ
ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಗ್ರಾಮೀಣ ಕುಡಿಯು ನೀರು ಪೂರೈಕೆ ಇಲಾಖೆ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.
ಜೆಜೆಎಂ ಪ್ರಗತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಸಭೆಗೆ ವರದಿ ನೀಡುತ್ತಿದ್ದಾಗ ಮಧ್ಯೆ ಪ್ರವೇಶಿಸಿ ಮಾತನಾಡಿದ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಅವರು, ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿ.ಎಸ್.ಪುರ ಹೋಬಳಿಯಲ್ಲಿ ಜೆಜೆಎಂ ಯೋಜನೆಯಡಿ ಕಳಪೆ ಕಾಮಗಾರಿ ನಡೆದಿದೆ. ೩ನೇ ದರ್ಜೆ ಗುತ್ತಿಗೆದಾರನಿಗೆ ಗುತ್ತಿಗೆ ನೀಡಲಾಗಿದೆ. ಇದರ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಆರ್‌ಓ ಪ್ಲಾಂಟ್‌ಗಳ ದುರಸ್ಥಿಗೆ ಸೂಚನೆ
ಜಿಲ್ಲೆಯಲ್ಲಿ ಹಾಳಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿಗೆ ಕ್ರಮ ಕೈಗೊಳ್ಳುವಂತೆಯೂ ಸಚಿವ ಪರಮೇಶ್ವರ್ ಅವರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದರು.
ಇನ್ನು ೧೫ ದಿನಗಳ ಒಳಗಾಗಿ ಸಿಇಓ ಅವರು ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಏತನ್ಮಧ್ಯೆ ಮಾತನಾಡಿದ ಗ್ರಾಮಾಂತರ ಶಾಸಕ ಸುರೇಶ್‌ಗೌಡ ಅವರು, ಶುದ್ಧ ಕುಡಿಯುವ ನೀರಿನ ಘಟಕಗಳು ಗ್ರಾಮಾಂತರ ಕ್ಷೇತ್ರದಲ್ಲೂ ಸಮರ್ಪಕ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿವೆ. ಇವುಗಳ ನಿರ್ವಹಣೆಯನ್ನು ಏಜೆನ್ಸಿಗಳಿಂದ ಗ್ರಾಮ ಪಂಚಾಯ್ತಿಗಳಿಗೆ ವಹಿಸುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್ ಅವರು, ಇನ್ನು ೧೫ ದಿನಗೊಳ ಒಳಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರತಿ ತಾಲ್ಲೂಕಿಗೂ ಭೇಟಿ ನೀಡಿ ಘಟಕಗಳ ದುರಸ್ಥಿಗೆ ಕ್ರಮ ಕೈಗೊಳ್ಳಲಿದ್ದಾರೆ. ಒಂದು ವೇಳೆ ಇದರಲ್ಲಿ ಏನಾದರೂ ವ್ಯತ್ಯಾಸವಾದರೆ ಮುಂದೆ ಗ್ರಾ.ಪಂ.ಗಳಿಗೆ ವಹಿಸುವ ಬಗ್ಗೆ ಚಿಂತನೆ ನಡೆಸೋಣ ಎಂದರು.
ಸಭೆಯಲ್ಲಿ ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜ್ಯೋತಿಗಣೇಶ್, ಕೆ. ಷಡಕ್ಷರಿ, ಬಿ. ಸುರೇಶ್‌ಗೌಡ, ತಿಪ್ಪೇಸ್ವಾಮಿ, ಡಾ. ರಂಗನಾಥ್, ಎಂ.ಟಿ. ಕೃಷ್ಣಪ್ಪ, ಹೆಚ್.ವಿ. ವೆಂಕಟೇಶ್, ಚಿದಾನಂದಗೌಡ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿ.ಪಂ. ಸಿಇಓ ಪ್ರಭು ಜೆ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.