ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಲು ಸಿಇಓ ಸೂಚನೆ

ವಿಜಯಪುರ ಆ.25: ಕುಡಿಯುವ ನೀರು ಪೂರೈಕೆ ಕಾರ್ಯದಲ್ಲಿ ಯಾವುದೇ ಲೋಪಗಳಾಗದಂತೆ ಎಚ್ಚರಿಕೆ ವಹಿಸಿ ಶುದ್ಧ ಕುಡಿಯುವ ನೀರು ಪೂರೈಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಸೂಚನೆ ನೀಡಿದ್ದಾರೆ.
ಗುರುವಾರ ನಗರದ ಜಿಲ್ಲಾ ಪಂಚಾಯತಿಯಲ್ಲಿ ಕುಡಿಯುವ ನೀರು ಮತ್ತು ಗೃಹಲಕ್ಷ್ಮೀ ಯೋಜನೆ ಪೂರ್ವಸಿದ್ಧತೆ ಕುರಿತು ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲ ಜಲಮೂಲಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು. ಜಲ ಮೂಲಗಳನ್ನು ಪ್ರತಿ ತಿಂಗಳು ಸ್ವಚ್ಛಗೊಳಿಸಬೇಕು. ಕುಡಿಯುವ ನೀರಿನ ಪರೀಕ್ಷೆ ಮಾಡಿಸಿ ನೀರು ಪೂರೈಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಪ್ರತಿ ತಿಂಗಳು ಆರ್.ಡಬ್ಲೂ.ಎಸ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಎಲ್ಲ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಂದ ಜಲಮೂಲಗಳು ಸ್ವಚ್ಛತೆ ಇರುವ ಕುರಿತು ದೃಢೀಕೃತ ವರದಿಯನ್ನು ಸಂಗ್ರಹಿಸಿ, ಪ್ರತಿ ತಿಂಗಳು ಜಿಲ್ಲಾ ಪಂಚಾಯತಿಗೆ ಸಲ್ಲಿಸಬೇಕು. ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ಲೋಪ ಸಹಿಸುವುದಿಲ್ಲ. ಒಂದು ವೇಳೆ ಲೋಪ ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಆರ್.ಓ. ಪ್ಲಾಂಟ್ ಗಳು ಕಡ್ಡಾಯವಾಗಿ ಸುಸ್ಥಿತಿಯಲ್ಲಿರುವಂತೆ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿಯವರು ಸಮನ್ವಯ ಸಾಧಿಸಿಕೊಂಡು ನಿರ್ವಹಣೆ ಮಾಡಬೇಕು. ಚಿಕ್ಕ-ಪುಟ್ಟ ದುರಸ್ಥಿಗಳಿದ್ದಲ್ಲಿ ಸಂಬಂಧಿಸಿದ ಏಜೆನ್ಸಿಯವರಿಂದ ದುರಸ್ಥಿ ಮಾಡಿಸಬೇಕು. ಒಂದು ವೇಳೆ ಸಂಬಂಧಿಸಿದ ಏಜೆನ್ಸಿಯವರು ಸ್ಪಂಧಿಸದಿದ್ದರೆ ಅವರಿಗೆ ನೋಟಿಸ್ ಜಾರಿ ಮಾಡಿ, ನೋಟಿಸ್ ನೀಡಿದರೂ ಸಹ ಅವರು ದುರಸ್ಥಿ ಮಾಡಲು ಹಿಂದೇಟು ಹಾಕಿದರೆ ಅವರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ದೂರುಗಳು, ಸಮಸ್ಯೆಗಳು ಗ್ರಾಮ ಪಂಚಾಯತಿಗೆ ಸಂಭಂದಪಟ್ಟಿರುತ್ತವೆ. ಹೀಗಾಗಿ ಗ್ರಾಮ ಪಂಚಾಯತಿ ಅಧಿಕಾರಿಗಳು ಈ ವಿಷಯವನ್ನು ಮನದಟ್ಟು ಮಾಡಿಕೊಂಡು ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿಕೊಂಡು ಸಮಸ್ಯೆ ಬಗೆಹರಿಸಬೇಕು. ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿರಬೇಕು. ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಆರ್.ಡಬ್ಲೂ.ಎಸ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮಗಳಿಗೆ ಭೇಟಿ ನೀಡಿ ಮೇಲುಸ್ತುವಾರಿ ನಡೆಸುವಂತೆ ಅವರು ಸೂಚಿಸಿದರು.
ಗೃಹ ಲಕ್ಷ್ಮೀ ಯೋಜನೆ: ಸರ್ಕಾರದ ಮಹತ್ವಾಕಾಂಕ್ಷೆ ಗೃಹಲಕ್ಷ್ಮಿ ಯೋಜನೆಯನ್ನು ಆ.30ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮವನ್ನು ಎಲ್ಲ ಗ್ರಾಮ ಪಂಚಾಯತಿ ಹಂತದಲ್ಲಿ ಸಾರ್ವಜನಿಕರಿಗೆ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲು ಸರ್ಕಾರ ನಿರ್ಧೇಶಿಸಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತಿಯ ಜಾಗ, ಸಮುದಾಯ ಭವನ, ಬಯಲು ಜಾಗದಲ್ಲಿ ವೇದಿಕೆ ಸಿದ್ದಪಡಿಸಿ ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸಬೇಕು. ಯಾವದೇ ಕಾರಣಕ್ಕೂ ಈ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳನ್ನು ಬಳಸಿಕೊಳ್ಳಬಾರದು ಮತ್ತು ಶಾಲಾ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿದಂತೆ ಸೂಚಿಸಿದ ಅವರು, ಕಾರ್ಯಕ್ರಮದ ಸ್ಥಳದಲ್ಲಿ ದ್ವಿಮುಖ ಸಂವಹನ ವ್ಯವಸ್ಥೆ, ಪೆÇ್ರಜೆಕ್ಟರ್, ಸ್ಪೀಕರ್, ಆಡಿಯೋ ವ್ಯವಸ್ಥೆ, ಕುಡಿಯುವ ನೀರು, ನೆರಳು ಮತ್ತು ಅಲ್ಪೋಪಹಾರದ ವ್ಯವಸ್ಥೆ ಮಾಡಿಕೊಳ್ಳಬೇಕು. ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ಮಾಡಿ ಕನಿಷ್ಠ 2000 ಜನರು ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಬೆಂಚ್ ಅಭಿಯಾನಕ್ಕೆ ಶಹಬ್ಬಾಷಗಿರಿ: ಜಿಲ್ಲೆಯಲ್ಲಿ ಕೈಗೊಂಡ ಬೆಂಚ್ ಅಭಿಯಾನಕ್ಕೆ ಅಭೂತ ಪೂರ್ವ ಬೆಂಬಲ ಸೂಚಿಸಿದ ಎಲ್ಲ ಅಧಿಕಾರಿಗಳಿಗೆ ಶಹಬ್ಬಾಷಗಿರಿ ನೀಡಿದರು. ಕೆಲವೇ ದಿನದಲ್ಲಿ 740 ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚ್ ಮತ್ತು ಟೇಬಲ್ ನೀಡಿರುವುದು ತುಂಬಾ ಸಂತಸ ತಂದಿದೆ ಎಂದರು. ತಿಕೋಟಾ, ಬಬಲೇಶ್ವರ ಮತ್ತು ಚಡಚಣ ತಾಲೂಕಿನಲ್ಲಿ ಅತೀ ಹೆಚ್ಚು ಅಂಗನವಾಡಿಗಳಲ್ಲಿ ಕುರ್ಚಿ & ಟೇಬಲ್ ವಿತರಣೆ ಮಾಡಲಾಗಿದ್ದು, ಮುಂದಿನ ದಿನದಲ್ಲಿ ಉಳಿದ ಎಲ್ಲ ಅಂಗನವಾಡಿಗಳಿಗೂ ಸಾಮಗ್ರಿ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಈ ಬೆಂಚ್ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಮತ್ತು ಸದಸ್ಯರು ಎಲ್ಲರೂ ತುಂಬಾ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾದ ಡಾ|| ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿಗಳಾದ ನಿಂಗಪ್ಪ ಗೋಠೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಬಸವರಾಜ ಕುಂಬಾರ, ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರುಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.