ಕುಡಿಯುವ ನೀರಿನ ಸಮಸ್ಯೆಗಳಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ:ಸಚಿವ ಈಶ್ವರ ಬಿ. ಖಂಡ್ರೆ

ಬೀದರ: ಮಾ.03: ದಿನೇ ದಿನೇ ಬೇಸಿಗೆ ಹೆಚ್ಚಾಗುತ್ತಿರುವುದರಿಂದ ಬೀದರ ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆಗಳಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಹಾಗೂ ಇತರೆ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಬೋರವೆಲ್ ಮತ್ತು ತೆರೆದ ಭಾವಿಗಳಲ್ಲಿ ನೀರು ಬತ್ತಿಹೋಗಿ ನೀರಿನ ಆಹಾಕಾರ ಎಲ್ಲಾ ಕಡೆ ಈ ಬೇಸಿಗೆಯಲ್ಲಿ ಕಂಡು ಬರುತ್ತದೆ ವಿಶೇಷವಾಗಿ ಔರಾದ ಮತ್ತು ಭಾಲ್ಕಿಯಲ್ಲಿ ನೀರಿನ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತದೆ ಹಾಗಾಗಿ ಜನರಿಗೆ 24 ತಾಸು ನೀರು ಕೊಡಬೇಕು. ನನ್ನ ಕ್ಷೇತ್ರದಲ್ಲಿ ಮೊನ್ನೆ ಹೆಣ್ಣುಮಕ್ಕಳು ಸೈಕಲ್ ಮೂಲಕ ಒಂದು ಕಿ.ಮೀ. ದೂರದಿಂದ ನೀರು ತರುತ್ತಿದ್ದೆವೆ ಎಂದು ಮನವಿ ಸಲ್ಲಿಸಿದರು ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಎಲ್ಲೂ ಕಂಡು ಬರಬಾರದು ಎಂದು ಹೇಳಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ನಗರಸಭೆ, ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಪುರಸಭೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಣೆ ಮಾಡಬೇಕು ಮತ್ತು ಜಾನುವಾರುಗಳಿಗೆ ಈ ಬೇಸಿಗೆಯಲ್ಲಿ ಮೇವಿನ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕೆಂದು ಸಚಿವರು ಪಶು ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.
ಜನರಿಗೆ ಶುದ್ಧವಾದ ನೀರು ಕೊಡಬೇಕು. ಈ ಹಿಂದೆ ಕೆಲವು ಕಡೆ ಕಲುಷಿತ ನೀರು ಕುಡಿದು ದುರ್ಘಟನೆಯಾಗಿರುವುದನ್ನು ನೋಡುತ್ತೆವೆ. ಆ ತರಹದ ಯಾವುದೇ ಘಟನೆಗಳು ಜಿಲ್ಲೆಯಲ್ಲಿ ನಡೆಯಭಾರದು. ನಮ್ಮ ಮೊದಲ ಆದ್ಯತೆಯನ್ನು ಕುಡಿಯುವ ನೀರಿಗೆ ಕೊಡಬೇಕು ಹಾಗೂ ಯಾವುದೇ ದೂರುಗಳು ಬಂದರೆ ತಕ್ಷಣ ಭೇಟಿ ನೀಡಬೇಕು. ಕುಡಿಯುವ ನೀರಿನ ಸಮಸ್ಯೆಗಳಾಗದಂತೆ ಸಹಾಯವಾಣಿ ತೆರೆದು ಅದಕ್ಕೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಹೇಳಿದರು.
ಬಿಸಿಲಿನ ತಾಪಮಾನ ಹೆಚ್ಚಾದರೆ ಮಾಹಿತಿ ನೀಡಬೇಕು. ಜನರಿಗೆ ಡಿ ಹೈಡ್ರೆಟ್ ಆಗದಂತೆ ಆಸ್ಪತ್ರೆಗಳಲ್ಲಿ ಓ.ಆರ್.ಎಸ್. ಪಾಕೇಟಗಳನ್ನು ಇಡಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಾರ್ಚ್ 7 ಕ್ಕೆ ಮುಖ್ಯಮಂತ್ರಿಗಳು ಬೀದರ ಜಿಲ್ಲೆಗೆ ಬರುತ್ತಿದ್ದು ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ಹೇಳಿದರು.
ಆರ್ಥಿಕ ವರ್ಷ ಮುಗಿಲಿಕ್ಕೆ ಬಂದಿದ್ದು, ಗ್ಯಾರಂಟಿ ಯೋಜನೆಗಳ ಜೊತೆಗೆ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯಬೇಕು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಹೋದ ಸಲ 3 ಸಾವಿರ ಕೋಟಿ ಹಣ ನೀಡಲಾಗಿತ್ತು ಈ ವರ್ಷ 5 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೆವೆ. ನೀರಾವರಿ, ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ ಕೆಲಸ ಮತ್ತು ಕಾಮಗಾರಿಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದು ಎಲ್ಲರೂ ಹಗಲಿರುಳು ಶ್ರಮಿಸುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕರಾದ ಪ್ರಭಾಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಜ್ಞಾನೇಶ್ವರ ನೀರಗುಡಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೆಶಕರಾದ ಸುರೇಖಾ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶಿಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.