ಕುಡಿಯುವ ನೀರಿನ ವ್ಯವಸ್ಥೆ ಕಲ್ಪಸಲು ಆಗ್ರಹ

ಕೋಲಾರ, ಆ.೬: ಧಾರಾಕಾರ ಮಳೆಯಿಂದಾಗಿ ತಾಲೂಕಿನ ಯರ್‍ಗೋಳ್ ಡ್ಯಾಂ ಭರ್ತಿಯಾಗಿದ್ದು, ಕೂಡಲೇ ಅದನ್ನು ಲೋಕಾರ್ಪಣೆಗೊಳಿಸಿ ಮೂರು ತಾಲೂಕಿನ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪೈಪ್‌ಲೈನ್ ಅಳವಡಿಕೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ತನಿಖೆ ಕೈಗೊಳ್ಳಬೇಕೆಂದು ರೈತಸಂಘದಿಂದ ತಹಸೀಲ್ದಾರ್‍ಗೆ ಮನವಿ ನೀಡಿ ಆಗ್ರಹಿಸಲಾಯತು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕಳೆದ ೧೩ ವರ್ಷಗಳ ಹಿಂದೆ ತಾಲೂಕಿನಲ್ಲಿ ಯರ್‍ಗೋಳ್ ಡ್ಯಾಂ ನಿರ್ಮಾಣ ಕಾಮಗಾರಿ ಆರಂಭಿಸಿ ಇತ್ತೀಚೆಗಷ್ಟೇ ಪೂರ್ಣಗೊಳಿಸಲಾಗಿ, ಸೂಕ್ತ ಸಮಯಕ್ಕೆ ಮಳೆಯು ಹೆಚ್ಚಿನ ಪ್ರಮಾಣದಲ್ಲಿ ಸುರಿದ ಪರಿಣಾಮ ಡ್ಯಾಂ ಭರ್ತಿಯಾಗಿ ನೀರು ನೆರೆಯ ತಮಿಳುನಾಡು ರಾಜ್ಯದ ಪಾಲಾಗಿದ್ದರೂ ಈವರೆಗೂ ಡ್ಯಾಂ ಲೋಕಾರ್ಪಣೆಗೆ ಕಾಲ ಕೂಡಿ ಬರದಿರುವುದು ವಿಷಾಧದ ಸಂಗತಿಯಾಗಿದೆ ಎಂದು ಹೇಳಿದರು.
ಯರ್‍ಗೋಳ್ ಯೋಜನೆಯಡಿ ಬೃಹತ್ ಡ್ಯಾಂ ನಿರ್ಮಿಸಿ ಅಲ್ಲಿ ಸಂಗ್ರಹವಾಗುವ ನೀರನ್ನು ಕೋಲಾರ, ಬಂಗಾರಪೇಟೆ ಹಾಗೂ ಮಾಲೂರು ತಾಲೂಕುಗಳಿಗೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶ ಹೊಂದಲಾಗಿದ್ದು, ಅಂತೆಯೇ ಇದೀಗ ಡ್ಯಾಂ ತುಂಬಿದ್ದರೂ ಲೋಕಾರ್ಪಣೆ ಹಾಗೂ ಕುಡಿಯುವ ನೀರಿನ ಸರಬರಾಜು ಬಗ್ಗೆ ಯಾರೂ ಸಹ ತಲೆ ಕೆಡಿಸಿಕೊಳ್ಳದೇ ಇದ್ದು, ಕೂಡಲೇ ಲೋಕಾರ್ಪಣೆಗೊಳಿಸಿ, ಕುಡಿಯುವ ನೀರನ್ನು ಮೂರು ತಾಲೂಕುಗಳಿಗೂ ಒದಗಿಸಬೇಕೆಂದು ಆಗ್ರಸಿದರು.
ತಾಲೂಕು ಅಧ್ಯಕ್ಷ ಮರಗಲ್ ಮುನಿಯಪ್ಪ, ಮಾತನಾಡಿ, ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಸಿದರು ಎಂಬಂತೆ ಡ್ಯಾಂ ನಿರ್ಮಾಣಕ್ಕೆ ಮುನ್ನವೇ ಪೈಪ್‌ಲೈನ್‌ಗಳನ್ನು ಹಾಕಿದ್ದು, ಇದೀಗ ಅವು ಈಗ ತುಕ್ಕು ಹಿಡಿದು, ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿವೆ. ಹೀಗಾಗಿ ಪೈಪ್‌ಲೈನ್ ಅಳವಡಿಕೆಯಲ್ಲಿ ನಡೆದಿರುವ ಹಗರಣದ ತನಿಖೆಗೆ ತಂಡ ರಚನೆ ಮಾಡಬೇಕೆಂದು ಒತ್ತಾಯಿಸಿದರು.
ಯರ್‍ಗೋಳ್ ಡ್ಯಾಂ ಇತ್ತೀಚೆಗೆ ಪ್ರವಾಸಿ ತಾಣವಾಗಿ ಮಾರ್ಪಡುತ್ತಿದ್ದು, ದಿನ ನಿತ್ಯ ನೂರಾರು, ವಾರಾಂತ್ಯದಲ್ಲಿ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಆ ಭಾಗವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಸಲುವಾಗಿ ಆನೆ ಉದ್ಯಾನವನ ನಿರ್ಮಿಸಲು ಅರಣ್ಯ ಇಲಾಖೆ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
ಹಾಗೂ ಯರ್‍ಗೋಳ್ ಸುತ್ತಮುತ್ತಲ ಸರಕಾರಿ ಜಾಗದ ಮೇಲೆ ಪ್ರಭಾವಿ ವ್ಯಕ್ತಿಗಳು ಕಣ್ಣಿಡುತ್ತಿರುವ ಬಗ್ಗೆ ಕೇಳಿ ಬರುತ್ತಿದ್ದು, ಯಾವುದೇ ಕಾರಣಕ್ಕೂ ಒತ್ತುವರಿಯಾಗದಂತೆ ತಾಲೂಕು ಆಡಳಿತದಿಂದ ಅಗತ್ಯ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ದಯಾಂದ್ ಅವರು, ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಮನವಿ ನೀಡುವಾಗ ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಚಾಂದ್‌ಪಾಷ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಬಾಬಾಜಾನ್, ಚಲಪತಿ, ಮುನಿರಾಜು, ನಾಗಯ್ಯ, ಮಂಗಸಂದ್ರ ತಿಮ್ಮಣ್ಣ, ಈಕಂಬಳ್ಳಿ ಮಂಜುನಾಥ್ ಮುಂತಾದವರಿದ್ದರು.