ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷ ಆದ್ಯತೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸೂಚನೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.02:- ಜಿಲ್ಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷ ಆದ್ಯತೆ ನೀಡಬೇಕು. ಜನರಿಗೆ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು ಎಂದು ಪಶು ಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತಕುಡಿಯುವ ನೀರಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಮುಂದೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದಿದ್ದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಿರಲು ಈಗಿನಿಂದಲೇ ಆಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು. ಜನರಿಗೆ ಕುಡಿಯುವ ನೀರಿನ ಬವಣೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದೆಂಬ ಬಗ್ಗೆ ಪೂರ್ವ ಪರಿಶೀಲನೆ ಮಾಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಈಗ ಇರುವ ಹಣವನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಕೆ ಮಾಡಲು ಸಿದ್ಧವಾಗಿಟ್ಟುಕೊಳ್ಳÀಬೇಕು. ಪ್ರಥಮಆದ್ಯತೆಯನ್ನು ಕುಡಿಯುವ ನೀರಿಗೆ ನೀಡಬೇಕು. ಪಂಚಾಯತ್‍ಅಭಿವೃದ್ಧಿ ಅಧಿಕಾರಿಗಳ ಸಭೆಕರೆದು ಮುಂಬರುವ ದಿನಗಳಲ್ಲಿ ಯಾವುದೇ ಭಾಗದಲ್ಲಿಕುಡಿಯುವ ನೀರಿಗೆಕೊರತೆ ಬಾರದಂತೆಅಗತ್ಯಕ್ರಮ ತೆಗೆದುಕೊಳ್ಳಬೇಕೆಂದು ತಾಲೂಕು ಪಂಚಾಯತ್‍ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಜಿಲ್ಲೆಯ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದಜಿಲ್ಲಾಉಸ್ತುವಾರಿ ಸಚಿವರು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರಇನ್ನಿತರ ಪರಿಕರಗಳನ್ನು ಅಗತ್ಯ ಪ್ರಮಾಣದಲ್ಲಿದಾಸ್ತಾನುಇಟ್ಟುಕೊಂಡಿರಬೇಕು. ಬೇಡಿಕೆಗೆತಕ್ಕಂತೆರೈತರಿಗೆ ಪೂರೈಸಬೇಕು. ಬೆಳೆಗಳಿಗೆ ವಿಮೆ ಸೌಲಭ್ಯ ಪಡೆಯಲು ಹೆಚ್ಚಿನಜಾಗೃತಿ ಮೂಡಿಸಬೇಕು. ಕರಪತ್ರ, ರೈತ ಸಂಪರ್ಕ ಕೇಂದ್ರಗಳು ಸೇರಿದಂತೆಇನ್ನಿತರ ವಿಧಾನಗಳ ಮೂಲಕ ಬೆಳೆ ವಿಮೆ ಕುರಿತು ಹೆಚ್ಚು ಪ್ರಚಾರ ಮಾಡಬೇಕು. ತಾಲೂಕು ಸಹಾಯಕ ಕೃಷಿ ನಿರ್ದೇಶಕರಿಗೆ ಈ ಬಗ್ಗೆ ಜವಾಬ್ದಾರಿ ನೀಡಬೇಕೆಂದು ಸಚಿವರು ತಿಳಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಮುಂಗಾರು ಹಂಗಾಮಿಗೆ ಈವರೆಗೆ ಎಷ್ಟು ಮಂದಿ ರೈತರು ಬೆಳೆ ವಿಮೆಗೆ ನೊಂದಾಯಿಸಿದ್ದಾರೆ ?, ಕಳೆದ ಬಾರಿ ವಿಮೆ ಮಾಡಿಸಿದವರಿಗೆ ಹಣ ಬಂದಿದಿಯೇ ? ಎಂಬ ಬಗ್ಗೆ ವಿವರ ನೀಡಬೇಕು. ಸಕಾಲದಲ್ಲಿ ಪ್ರಯೋಜನ ರೈತರಿಗೆ ತಲುಪಬೇಕು ಎಂದು ತಿಳಿಸಿದರು.
ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಕಳೆದ ಬಾರಿ ಮಳೆಯಿಂದ ಬಾಳೆ ಸೇರಿದಂತೆ ಇತರೆ ಬೆಳೆಗಳು ಹಾನಿಗೀಡಾಗಿವೆ. ಈ ಬಗ್ಗೆ ನೀಡಲಾಗಿರುವ ಪರಿಹಾರಗಳ ಕ್ರಮದ ಕುರಿತು ಮಾಹಿತಿ ನೀಡಬೇಕು. ಮುಂದೆ ಮಳೆ ಬರದಿದ್ದರೆ ಪರಿಸ್ಥಿತಿ ನಿಭಾಯಿಸಲು ಯಾವ ಸಿದ್ದತಾ ಕ್ರಮ ಕೈಗೊಂಡಿದ್ದೀರಿ ? ಎಂಬ ಬಗ್ಗೆ ವಿವರ ನೀಡಬೇಕು ಎಂದರು.
ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ ಹನೂರು ವಿಧಾನಸಭಾ ಕ್ಷೇತ್ರದ ಹಲವೆಡೆ ಇತ್ತೀಚೆಗೆ ವೇಗವಾಗಿ ಬೀಸಿದ ಗಾಳಿ ಬಡಿತಕ್ಕೆ ಸಾಕಷ್ಟು ಬೆಳೆ ಹಾನಿಯಾಗಿದೆ. ಗುಡ್ಡಗಾಡು ಪ್ರದೇಶದಲ್ಲಿ ತೊಂದರೆ ಅನುಭವಿಸಿದ್ದು, ಬಾಳೆ ಹಾಳಾಗಿದೆ. ಇದಕ್ಕೆ ಹೆಚ್ಚಿನ ಪರಿಹಾರ ಸಿಗಬೇಕು ಎಂದರು.
ಸಹಕಾರ ಇಲಾಖೆ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಎನ್. ಮಂಜುನಾಥ ಪ್ರಸಾದ್ ಅವರು ಮಾತನಾಡಿ ಮಳೆಯ ಮುನ್ಸೂಚನೆ ಬಗ್ಗೆ ಹವಾಮಾನ ಇಲಾಖೆ ನಿಖರ ಮಾಹಿತಿ ನೀಡಲಿದೆ. ಮಳೆ ಕೊರತೆಯಾದರೆ ಪರ್ಯಾಯವಾಗಿ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಪೂರ್ವಸಿದ್ದತೆಯನ್ನು ಅಧಿಕಾರಿಗಳು ಮಾಡಬೇಕಿದೆ ಎಂದು ತಿಳಿಸಿದರು.
ಕಾಡಂಚಿನ ಪ್ರದೇಶಗಳು, ಪೋಡುಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಅನುಮತಿ ವಿಳಂಬವಾಗುತ್ತಿದೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಈ ಸಂದರ್ಭದಲ್ಲಿ ಸಚಿವರು ಕುಡಿಯುವ ನೀರಿನಂತಹ ಅಗತ್ಯ ಸೌಕರ್ಯಗಳಿಗೆ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆ ನಡೆಸಿ ಯೋಜನೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಿ ಎಂದರು.
ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಜಿಲ್ಲೆಯ ಆಸ್ಪತ್ರೆ ಹಾಗೂ ವೈದ್ಯರ ಲಭ್ಯತೆ ಬಗ್ಗೆ ವಿವರ ಪಡೆದ ಉಸ್ತುವಾರಿ ಸಚಿವರು ಡಯಾಲಿಸಿಸ್ ಚಿಕಿತ್ಸೆಗೆ ಆಯಾ ಭಾಗದಲ್ಲಿಯೇ ಅನುಕೂಲವಾಗಬೇಕು. ಪ್ರಸ್ತಾವನೆಗೊಂಡಿರುವ ಆಸ್ಪತ್ರೆಗಳ ಕಾರ್ಯಾರಂಭಕ್ಕೆ ಅಗತ್ಯ ಕ್ರಮ ವಹಿಸುವಂತೆ ಸಚಿವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಮಾತನಾಡಿ ಕಾಡಂಚಿನ ಭಾಗಗಳಲ್ಲಿ ಜನರು ಆಸ್ಪತ್ರೆಗೆ ಬರಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅರಣ್ಯ ವಾಸಿಗಳಿಗೆ ಸಮರ್ಪಕವಾಗಿ ಆರೋಗ್ಯ ಸೌಲಭ್ಯ ಸಿಗÀಬೇಕು. ಡಯಾಲಿಸಿಸ್‍ನ ಒಂದು ಚಿಕಿತ್ಸಾ ಕೇಂದ್ರ ವ್ಯವಸ್ಥೆಗೆ ನನ್ನ ಕ್ಷೇತ್ರದ ಅನುದಾನದಲ್ಲಿ ನೆರವು ನೀಡುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ ಅವರು ಮಾತನಾಡಿ ಅದಿವಾಸಿಗಳ ಸಂಖ್ಯಗೆ ಅನುಗುಣವಾಗಿ ಆರೋಗ್ಯ ಸೌಲಭ್ಯ ಒದಗಿಸಬೇಕಿದೆ. ವಾರದಲ್ಲಿ ಎರಡು ದಿನ ಮೊಬೈಲ್ ವಾಹನಗಳ ಮೂಲಕ ಹಾಡಿಗಳಿಗೆ ಸಂಚರಿಸಿ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡಬೇಕು ಎಂದರು.
ಈ ಬಗ್ಗೆ ಸಚಿವ ಕೆ. ವೆಂಕಟೇಶ್ ಅವರು ಮಾತನಾಡಿ ಅಧಿಕಾರಿಗಳು ಸ್ಪಂದನಾಶೀಲರಾಗಿ ಕಾರ್ಯನಿರ್ವಹಿಸಬೇಕು. ಜನರನ್ನು ಅಲೆದಾಡಿಸದೇ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಯಾವುದೇ ಸಬೂಬು, ಕಾರಣ ಹೇಳಿ ಜನರ ಕೆಲಸ ಮಾಡುವುದನ್ನು ನಿಲ್ಲಿಸಬಾರದು. ಸರ್ಕಾರ ಇರುವುದೇ ಜನರ ಕೆಲಸಕ್ಕಾಗಿ. ಸಾರ್ವಜನಿಕರ ಒಳಿತಿಗೆ ಕಾರ್ಯನಿರ್ವಹಿಸಿದರೆ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದು ತಿಳಿಸಿದರು.
ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅವರು ಮಾತನಾಡಿ ತಮ್ಮ ಕ್ಷೇತ್ರದ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಾಹಿತಿ ಹಕ್ಕಿನಡಿ ಕೇಳಲಾದ ಮಾಹಿತಿಗೆ ಹೆಚ್ಚು ಮೊತ್ತದ ಶುಲ್ಕ ಕಟ್ಟುವಂತೆ ಅರ್ಜಿದಾರರಿಗೆ ಕೇಳಲಾಗಿದೆ. ಈ ಬಗ್ಗೆ ನಿಖರವಾಗಿ ಪರಿಶೀಲಿಸಿ ವಿವರ ನೀಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಶು ಸಂಗೋಪನೆ, ತೋಟಗಾರಿಕೆ, ರೇಷ್ಮೆ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಇದಕ್ಕೂ ಮೊದಲು ತಾಲೂಕಿನ ಬದನಗುಪ್ಪೆ ಬಳಿ ಇರುವ ಕೈಗಾರಿಕಾ ಪ್ರದೇಶದಲ್ಲಿ ಗಿಡ ನೆಡುವ ಮೂಲಕ ಉಸ್ತುವಾರಿ ಸಚಿವರು ವನ ಮಹೋತ್ಸವಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು ವನ ಮಹೋತ್ಸದ ಅಂಗವಾಗಿ 6 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದರು.
ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಪೂವಿತ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ, ಬಂಡೀಪುರ ಹುಲಿ ಸಂರಕ್ಷೀತ ಪ್ರದೇಶದ ನಿರ್ದೇಶಕÀ ರಮೇಶ್‍ಕುಮಾರ್, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ದೀಪಾ ಕಂಟ್ರಾಕ್ಟರ್, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.