ಕುಡಿಯುವ ನೀರಿನ ವಿಷಯದಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಿ

ರಾಯಚೂರು,ಆ.೧೮-
ಮಾನ್ವಿ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರಿನ ಸರಬರಾಜು, ರಬ್ಬಣಕಲ್ ನೀರು ಶುದ್ಧೀಕರಣ ಘಟಕಕ್ಕೆ ಸಮರ್ಪಕ ವಿದ್ಯುತ್ ಸಂಪರ್ಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್‌ಎಸ್ ಬೋಸರಾಜು ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಮಾನ್ವಿ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮಾನ್ವಿ ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರು ಸರಬರಾಜು, ವಿದ್ಯುತ್ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಲಾಯಿತು.
ಕರ್ನಾಟಕ ನೀರು ಸರಬರಾಜು ನಿಗಮದ ಸಹಾಯಕ ಅಭಿಯಂತರರಾದ ಚೌಹಾಣ್ ಅವರು ಮಾತನಾಡಿ, ರಬ್ಬಣಕಲ್ ನೀರು ಶುದ್ಧೀಕರಣ ಘಟಕಕ್ಕೆ ಮದ್ಲಾಪೂರು ವಿದ್ಯುತ್ ಉಪವಿಭಾಗದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕ್ರಾಸ್ ಲೈನ್ ನಿಂದ ಶಾರ್ಟ್ ಸರ್ಕ್ಯೂಟ್ ಆಗುತ್ತಿರುವುದರಿಂದ ವಿದ್ಯತ್ ವ್ಯತ್ಯಯವಾಗಿ ಹಾಗೂ ಕಡಿತವಾಗಿ ಸಮರ್ಪಕ ನೀರು ಸರಬರಾಜಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ ಕಾತರಕಿಯ ತುಂಗಭದ್ರ ನದಿಯಲ್ಲಿ ರಬ್ಬಣಕಲ್ ಶುದ್ಧೀಕರಣ ಘಟಕಕ್ಕೆ ನೀರು ಸರಬರಾಜು ಮಾಡುವ ಜಾಕ್-ವೆಲ್ ಗೂ ವಿದ್ಯುತ್ ಸಮಸ್ಯೆಯಾಗುತ್ತಿದೆ ಏಕೆಂದರು ಜಾಕ್-ವೆಲ್ ಗಾಗಿ ಪ್ರತ್ಯೇಕವಾಗಿ ತೆಗೆದುಕೊಂದ ವಿದ್ಯುತ್ ಲೈನ್ ನಲ್ಲಿ ಖಾಸಗಿಯವರಿಗೆ ಸಂಪರ್ಕ ಕಲ್ಪಿಸಿರುವುದರಿಂದ ವಿದ್ಯುತ್ ವೋಲ್ಟೇಜ್ ಸಾಲುತ್ತಿಲ್ಲ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು.
ಸಮರ್ಪಕ ಕುಡಿಯುವ ನೀರು ಸರಬರಾಜುಗೆ ತೊಂದರೆಯಾಗುತ್ತಿರುವ ವಿದ್ಯುತ್ ಲೈನ್ ಗಳನ್ನು ಪರಿಶೀಲಿಸಿ ಶೀಘ್ರ ಅಗತ್ಯ ಕ್ರಮ ಕೈಗೊಂಡು ಶಾಶ್ವತವಾಗಿ ವಿದ್ಯತ್ ಸಮಸ್ಯೆ ಪರಿಹರಿಸಲು ವೈಜ್ಞಾನಿಕವಾಗಿ ಅಂದಾಜು ಪಟ್ಟಿ ತಯ್ಯಾರಿಸಿ ವರದಿ ನೀಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಕುಡಿಯುವ ನೀರಿನ ವಿಷಯದಲ್ಲಿ ಅಧಿಕಾರಿಗಳು ಶೀಘ್ರ ಸ್ಪಂದಿಸಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಇಲ್ಲವಾದರೆ ಜಾಗ ಕಾಲಿ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಪುರಸಭೆಯಲ್ಲಿ ನೀರು ಸರಬರಾಜು ಮಾಡುವ ವಾಟರ್ ಮ್ಯಾನ್ ಗಳಿಗೆ ನೀರಿಗಾಗಿ ಸಾರ್ವಜನಿಕರ ಕರೆಗಳು ಬಂದಾಗ ಶೀಘ್ರ ಪ್ರತಿಕ್ರಿಯಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಗಂಗಾಧರ್, ಜೆಸ್ಕಾಂ ಮಾನ್ವಿ ಉಪ ವಿಭಾಗದ ಸಹಾಯಕ ಅಭಿಯಂತರಾದ ವೀರಭದ್ರಯ್ಯ ಪುರಸಭೆಯ ಶಫೀ, ಕಾಂಗ್ರೆಸ್ ಮುಖಂಡರಾದ ವಸಂತ ನಾಯಕ್, ಶರಣಬಸವ, ಬಾಲಸ್ವಾಮಿ ಕೊಡ್ಲಿ, ಗಫೂರ್ ಸಾಬ್, ಸದಸ್ಯರುಗಳಾದ ರಾಜಾ ಮಹೇಂದ್ರ ನಾಯಕ್, ಸುಖಮುನಿ, ಸಾಭೀರ್ ಹುಸೇನ್, ಹಂಜದ್ ಖಾನ್, ವೆಂಕಟೇಶ ನಾಯಕ್, ಸತ್ತರ್ ಸಾಬ್ ಬಂಗಲೇವಾಲೆ, ಬಸವರಾಜ್ ಭಜೆಂತ್ರಿ, ಶರಣಬಸವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.