ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ : ಬಳ್ಳಾರಿ

ಬ್ಯಾಡಗಿ,ಜು.23: ತಾಲೂಕಿನ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಆಣೂರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಂದ ಚಾಲನೆ ನೀಡಲಾಗುವುದು ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಬಿಸಲಹಳ್ಳಿ ಮತ್ತು ಬೆಳಕೇರಿ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ 2.50ಕೋಟಿ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಆಣೂರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 135ಕೋಟಿ ರೂಗಳ ಅನುದಾನ ಮಂಜೂರಾಗಿದ್ದು, ಈಗಾಗಲೇ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯು ಸಹ ಪೂರ್ಣಗೊಂಡಿದೆ. ಈ ಯೋಜನೆಯಡಿ ಬ್ಯಾಡಗಿ ತಾಲೂಕಿನ 20, ರಾಣೆಬೆನ್ನೂರ ತಾಲೂಕಿನ 13, ಹಾವೇರಿ ತಾಲೂಕಿನ 17 ಹಾಗೂ ಹಿರೇಕೆರೂರು ತಾಲೂಕಿನ ಒಂದು ಗ್ರಾಮ ಸೇರಿದಂತೆ 51ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದರಲ್ಲದೇ, ಈ ಯೋಜನೆಯು ಸೇರಿದಂತೆ ವಿವಿಧ ಇಲಾಖೆಗಳ ಅಭಿವೃಧ್ಧಿ ಕಾಮಗಾರಿಗಳಿಗೆ ಆಗಸ್ಟ್ ತಿಂಗಳೊಳಗಾಗಿ ಮುಖ್ಯಮಂತ್ರಿಗಳಿಂದ ಚಾಲನೆ ಸಿಗಲಿದೆ ಎಂದು ಹೇಳಿದರು.
ಎಇಇ ಸುರೇಶ ಬೇಡರ ಮಾತನಾಡಿ, ಮನೆಮನೆಗೆ ಗಂಗೆ ಯೋಜನೆಯಡಿ ಜನರಿಗೆ ಶುದ್ಧ ನೀರನ್ನು ಪೂರೈಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯಡಿ ಪ್ರತಿ ವ್ಯಕ್ತಿಗೆ ಪ್ರತಿದಿನ 55 ಲೀಟರ್‍ನಂತೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಲಾಗಿದ್ದು, ಪ್ರತಿ ಗ್ರಾಮದ ಜನಸಂಖ್ಯೆ ಹಾಗೂ ನೀರಿನ ಪ್ರಮಾಣ ಆಧರಿಸಿ ಮೊದಲ ಹಂತದಲ್ಲಿ ಸಂಪರ್ಕ ಕಲ್ಪಿಸಲಾಗುವುದು. ಜನಸಂಖ್ಯೆ ಆಧರಿಸಿ ಕಡಿಮೆ ನೀರಿನ ಮೂಲಗಳಿರುವ ಗ್ರಾಮಗಳಲ್ಲಿ ಜಲಶೇಖರಣೆ ಕಾಮಗಾರಿಗಳನ್ನು ಕೈಗೊಂಡು ಹಂತ? ಹಂತವಾಗಿ ಮನೆ? ಮನೆಗೆ ಸಂಪರ್ಕ ಕಲ್ಪಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಜೆಜೆಎಂ ಯೋಜನೆಯ ಸಂಯೋಜಕಿ ಜ್ಯೋತಿ ನಾಯಕ್, ಗ್ರಾಮಗಳಲ್ಲಿ ಜೆಜೆಎಂ ಯೋಜನೆಯ ಅನುಷ್ಠಾನ ಹಾಗೂ ಸಾರ್ವಜನಿಕರ ಬಳಕೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಲಲಿತಮ್ಮ ಗೌಡ್ರ ವಹಿಸಿದ್ದರು. ಉಪಾಧ್ಯಕ್ಷ ಈಶ್ವರ ನೇಶ್ವಿ, ಸದಸ್ಯರಾದ ದ್ಯಾಮನಗೌಡ ಪೂಜಾರ, ಹೇಮಂತ ಶೆಟ್ಟರ, ಶೇಖರಗೌಡ ಗೌಡ್ರ, ಚಂದ್ರಣ್ಣ ಮುಚ್ಚಟ್ಟಿ, ಶಿವಬಸಪ್ಪ ಕುಳೇನೂರ, ಶಿವಣ್ಣ ಹರಮಗಟ್ಟಿ, ಸಿದ್ದಯ್ಯ ಪಾಟೀಲ, ಬಸಣ್ಣ ಕಾಕೋಳ, ಹನಮಂತಪ್ಪ ಮಾಳಗಿ, ಅಂದಾನಪ್ಪ ಮುಚ್ಚಟ್ಟಿ, ಜಗದೀಶ ದೊಡ್ಡಮನಿ, ಇಂಜನೀಯರ್ ವೈ.ಕೆ.ಮಟಗಾರ, ರಾಮಣ್ಣ ಗಾಜೇರ, ಗುತ್ತಿಗೆದಾರರಾದ ಯಲ್ಲನಗೌಡ ಕರೇಗೌಡ್ರ, ಪುಟ್ಟನಗೌಡ ಪಾಟೀಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಓ ಲತಾ ತಬರೆಡ್ಡಿ ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.