ಕುಡಿಯುವ ನೀರಿನ ಪೈಪ್ ದುರಸ್ತಿಗೆ ಆಗ್ರಹ

ರಾಯಚೂರು,ಮೇ೨೩:ನಗರದ ಸಿಯಾತಲಾಬ್‌ನ ೮೦ ಅಡಿ ರಸ್ತೆಯಲ್ಲಿ ಹೊಡೆದು ಹೋಗಿರುವ ಕುಡಿಯುವ ನೀರಿನ ಪೈಪ್‌ನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಅಂಬೇಡ್ಕರ್ ಯುವಕ ಮಂಡಳಿ ಆಗ್ರಹಿಸಿದೆ.
೮೦ ಅಡಿ ರಸ್ತೆಯ ಅಂಬೇಡ್ಕರ್ ನಾಮಫಲಕದ ಬಳಿ ಕುಡಿಯುವ ನೀರಿನ ಪೈಪ್ ಹೊಡೆದುಹೋಗಿ ೪ ತಿಂಗಳೇ ಕಳೆದಿದೆ. ಹೊಡೆದುಹೋಗಿರುವ ಪೈಪ್‌ನ ಭಾಗದಿಂದ ಅನಗತ್ಯವಾಗಿ ನೀರು ಪೋಲಾಗಿ ರಸ್ತೆ ಹಾಗೂ ಚರಂಡಿಗಳಲ್ಲಿ ಹರಿಯುತ್ತಿದೆ. ಇದರೊಂದಿಗೆ ಚರಂಡಿ ಹಾಗೂ ರಸ್ತೆಯಲ್ಲಿನ ಕಸ ನೀರಿಗೆ ಸೇರ್ಪಡೆಯಾಗುತ್ತಿರುವುದರಿಂದ ನೀರು ಕಲುಷಿತಗೊಂಡು ಸಾಂಕ್ರಾಮಿಕ ರೋಗದ ಭೀತಿ ಸಹ ಎದುರಾಗಿದೆ. ಅಧಿಕಾರಿಗಳಿಗೆ ಈಗಾಗಲೇ ಈ ಸಂಬಂಧ ಹಲವು ಬಾರಿ ಮನವಿ ಮಾಡಿದ್ದರು. ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ ಎಂದು ಅಂಬೇಡ್ಕರ್ ಯುವಕ ಮಂಡಳಿ ಆರೋಪಿಸಿದೆ.
ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹೊಡೆದು ಹೋಗಿರುವ ನೀರಿನ ಪೈಪ್‌ನ್ನು ದುರಸ್ತಿಗೊಳಿಸಲು ನಗರಸಭೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಯುವಕ ಮಂಡಳಿಯ ಉಪಾಧ್ಯಕ್ಷ ನರಸಿಂಹ ಒತ್ತಾಯಿಸಿದ್ದಾರೆ.