ಕುಡಿಯುವ ನೀರಿನ ಪೂರೈಕೆಗೆ ಜಿಲ್ಲೆಗೆ 1 ಕೋಟಿ ರೂ ಮಂಜೂರು : ಕೃಷ್ಣಭೈರೇಗೌಡ


(ಸಂಜೆವಾಣಿ ವಾರ್ತೆ)
ಬೆಂಗಳೂರು, ಜುಲೈ 06: ಕುಡಿಯುವ ನೀರಿನ‌‌ ಸಮಸ್ಯೆ ಇರುವ ಗ್ರಾಮಗಳಿಗೆ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೀರಿನ ಪೂರೈಕೆಗೆ ಪ್ರತಿ ಜಿಲ್ಲೆಗೆ 1 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ತಿಳಿಸಿದ್ದಾರೆ.
ಇಂದು ನಡೆದ ವಿಧಾನ ಸಭೆ ಶೂನ್ಯ ವೇಳೆ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಯಿತು. ರಾಜ್ಯದಲ್ಲಿ ಮಳೆ ಕೊರತೆಯಾಗಿದೆ. ಕುಡಿಯುವ ನೀರಿಗೂ ತತ್ವಾರವಾಗಿದೆ ಸರ್ಕಾರ ಈ ಬಗ್ಗೆ ಯಾವ ಕ್ರಮ ತೆಗೆದುಕೊಂಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಸಚಿವ ಕೃಷ್ಣಭೈರೇಗೌಡ ಉತ್ತರಿಸಿ, “ರಾಜ್ಯದಲ್ಲಿ 193 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಗ್ರಾಮಗಳಲ್ಲಿ ಖಾಸಗಿ ಬೋರ್ವೆಲ್ ಮತ್ತು ಟ್ಯಾಂಕರ್ ಮೂಲಕ ನೀರಿನ ಪೂರೈಕೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಎಲ್ಲ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಲಾಗಿದ್ದು, ಯಾವ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾದರೂ ತುರ್ತು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಜೊತೆಗೂ ಸಭೆ ನಡೆಸಿದ್ದು ಈಗಾಗಲೇ ಪ್ರತಿ ಜಿಲ್ಲೆಗೂ ನೀರಿನ ಪೂರೈಕೆಗಾಗಿ ಒಂದು ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
“ಕುಡಿಯುವ ನೀರಿನ ಸಮಸ್ಯೆ ಎಲ್ಲೇ ಉಂಟಾದರೂ ಅಧಿಕಾರಿಗಳು ತುರ್ತು ಕ್ರಮಕ್ಕೆ ಮುಂದಾಗಬೇಕು. ಈ ಸಂಬಂಧ ಇತ್ತೀಚೆಗೆ ಬೆಳಗಾಂ ವಿಭಾಗದ ಅಧಿಕಾರಿಗಳ ಜೊತೆಗೂ ಸಭೆ ನಡೆಸಿ ಸೂಚನೆ ನೀಡಲಾಗಿದೆ. ನೀರಿನ ಪೂರೈಕೆಯಲ್ಲಿ ವಿಳಂಬ ಅಥವಾ ನ್ಯೂನ್ಯತೆಗಳಿದ್ದರೆ ಶಾಸಕರು ಆ ಬಗ್ಗೆ ಗಮನಕ್ಕೆ ತಂದರೆ ಅದನ್ನೂ ಬಗೆಹರಿಸಲಾಗುವುದು” ಎಂದು ಸಚಿವರು ಭರವಸೆ ನೀಡಿದರು.
ಮುಂಗಾರು ಚುರುಕಾಗಿದೆ:
ಮಳೆ ಪ್ರಮಾಣದ ಕುಸಿತದ ಬಗೆಗಿನ ಪ್ರಶ್ನೆಗೂ ಸದನದಲ್ಲಿ ಉತ್ತರ ನೀಡಿದ ಸಚಿವ ಕೃಷ್ಣಭೈರೇಗೌಡ ಅವರು, “ಜೂನ್ ತಿಂಗಳಲ್ಲಿ ಸರಾಸರಿಗಿಂತ ಕಡಿಮೆ‌ ಮಳೆಯಾಗಿದೆ. ಆದರೆ, ಮುಂದಿನ ಹತ್ತು ದಿನಗಳಲ್ಲಿ ಉತ್ತಮ ಮಳೆಯಾಗಲಿದೆ, ಕಲ್ಯಾಣ ಕರ್ನಾಟಕ ಭಾಗದಲ್ಲೂ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ನಾನಾ ಕಡೆಗಳಲ್ಲಿ ಉತ್ತಮ ಮಳೆಯಾಗಿರುವ ಬಗ್ಗೆ ಈಗಾಗಲೇ ವರದಿಗಳಾಗುತ್ತಿವೆ. ಈ ಮಳೆಯ ಪ್ರಮಾಣ ಸರಾಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿದ್ದು, ಮತ್ತಷ್ಟು ಮಳೆಯಾಗುವ ಬಗ್ಗೆ ವಿಶ್ವಾಸ ಇದೆ” ಎಂದು ತಿಳಿಸಿದರು.