ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸುವಂತೆ ಆಗ್ರಹ

????????????????????????????????????

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.11: ಜಾನುವಾರಗಳ ಸಂರಕ್ಷಣೆಗಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳು ತಮ್ಮ ಸಂಘದ ಆವರಣದಲ್ಲಿ ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸುವಂತೆ ಕಾಂಗ್ರೆಸ್ ಮುಖಂಡ ಹಾಗು ತಾಲೂಕು ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು ಪ್ರಸಕ್ತ ಸಾಲಿನಲ್ಲಿ ತಾಲೂಕು ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಕೆರೆ-ಕಟ್ಟೆಗಳೂ ನೀರಿಲ್ಲದೆ ಬರಿದಾಗಿವೆ. ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳೂ ಸ್ಥಗಿತಗೊಳ್ಳುತ್ತಿವೆ. ಬೋರ್‍ವೆಲ್ ಆಶ್ರಿತ ಕೃಷಿಕರು ಸಂಕಷ್ಠಕ್ಕೆ ಸಿಲುಕಿದ್ದು ರೈತರ ಕಣ್ಣೆದುರಿನಲ್ಲಿಯೇ ಅವರು ಬೆಳೆದ ಕಬ್ಬು, ಅಡಿಕೆ, ತೆಂಗು ಮುಂತಾದ ಬೆಳೆಗಳು ಒಣಗುತ್ತಿವೆ. ಅಂತರ್ಜಲ ಮಟ್ಟ ಕುಸಿದು ಕೊಳವೆಬಾವಿಗಳು ಒಣಗಿದ ಪರಿಣಾಮ ಗ್ರಾಮೀಣ ಕುಡಿಯುವ ನೀರು ಪೂರೈಕೆ ಜಾಲವೂ ಅಸ್ತವ್ಯಸ್ಥಗೊಂಡಿದೆ. ಅತ್ಯಂತ ಕಠಿಣ ಸನ್ನಿವೇಶದಲ್ಲಿ ತಾಲೂಕು ಆಡಳಿತ ಗ್ರಾಮೀಣ ಭಾಗದಲ್ಲಿ ಟ್ಯಾಂಕರ್ ಗಳ ಮೂಲಕ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ.
ತಾಲೂಕು ಕುಡಿಯುವ ನೀರು ನಿರ್ವಹಣಾ ಸಮಿತಿ (ಟಾಸ್ಕ್ ಪೆÇೀರ್ಸ್) ಗ್ರಾಮೀಣ ಜನರ ಕುಡಿಯುವ ನೀರು ಪೂರೈಕೆಗೆ ಶ್ರಮಿಸುತ್ತಿದೆ. ಆದರೆ ಟ್ಯಾಂಕರ್ ನೀರು ಜನರ ಕುಡಿಯುವ ನೀರಿನ ದಾಹವನ್ನು ಮಾತ್ರ ತಣಿಸುತ್ತಿದ್ದು ರೈತರ ಎಮ್ಮೆ ದನಗಳು, ಆಡು ಕುರಿಗಳು ಕುಡಿಯುವ ನೀರಿಗೆ ಪರಿತಪಿಸುತ್ತಿವೆ. ರೈತರು ಜಾನುವಾರಗಳ ಕುಡಿಯುವ ನೀರಿನ ದಾಹವನ್ನು ತಣಿಸಲು ನೀರಿನ ಮೂಲಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ತೀವ್ರ ಬರಗಾಲದಿಂದ ಕೃಷಿ ಕ್ಷೇತ್ರ ಸಂಪೂರ್ಣ ಹಾಳಾಗಿದ್ದು ಸಂಕಷ್ಠದ ಸನ್ನಿವೇಶದಲ್ಲಿ ಹೈನುಗಾರಿಕೆಯನ್ನು ನಂಬಿ ರೈತರು ಬದುಕುತ್ತಿದ್ದಾರೆ. ಬರಗಾಲದ ಪರಿಣಾಮ ಹೈನುಗಾರಿಕೆಯ ಮೇಲೂ ಆಗಿದ್ದು ಜಾನುವಾರುಗಳಿಗೆ ಮೇವಿನ ಜೊತೆಗೆ ಕುಡಿಯುವ ನೀರಿನ ಬರವೂ ಎದುರಾಗಿದೆ. ಗ್ರಾಮೀಣ ಪ್ರದೇಶದ ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರು ಹಾಕುವ ಹಾಲನ್ನು ಅವಲಂಭಿಸಿದ್ದು ಆರ್ಥಿಕವಾಗಿ ಸದೃಡವಾಗಿವೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಅಸ್ತಿತ್ವ ನಿಂತಿರುವುದೇ ಹಸು, ಎಮ್ಮೆಗಳು ನೀಡುವ ಹಾಲಿನಿಂದ. ಆದಕಾರಣ ಗ್ರಾಮೀಣ ಪ್ರದೇಶದ ಹಾಲು ಉತ್ಪಾದಕರ ಸಹಕಾರ ಸಂಘಗಳು ಜಾನುವಾರುಗಳ ನೆರವಿಗೆ ನಿಲ್ಲಬೇಕು. ತಮ್ಮ ತಮ್ಮ ವ್ಯಾಪ್ತಿಯಲ್ಲಿ ತಮ್ಮ ಸಹಕಾರ ಸಂಘದ ಕಟ್ಟಡಗಳ ಆವರಣದಲ್ಲಿಯಾದರೂ ಜಾನುವಾರುಗಳ ಅಗತ್ಯತೆಗೆ ಅನುಗುಣವಾಗಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಅವುಗಳಿಗೆ ನೀರು ತುಂಬಿಸಿ ಜಾನುವಾರಗಳ ರಕ್ಷಣೆಗೆ ಮುಂದಾಗಬೇಕೆಂದು ಬಿ.ಎಲ್.ದೇವರಾಜು ಒತ್ತಾಯ ಮಾಡಿದ್ದಾರೆ.
ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಮತ್ತು ಜೆಡಿಎಸ್ ಮುಖಂಡ ಡಾಲು ರವಿ ತಾಲೂಕಿನಿಂದ ಜಿಲ್ಲಾ ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿದ್ದಾರೆ. ಈ ಇಬ್ಬರು ಮುಖಂಡರೂ ತಕ್ಷಣವೇ ಒಕ್ಕೂಟದ ಅಧ್ಯಕ್ಷರು ಮತ್ತು ನಿರ್ದೇಶಕರುಗಳೊಂದಿಗೆ ಮಾತನಾಡಿ ಜಿಲ್ಲೆಯಾದ್ಯಂತ ಅಗತ್ಯವಿರುವ ಕಡೆಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಜಾನುವಾರುಗಳಿಗೆ ಮೀಸಲಾದ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಿದರೆ ಹೈನುಗಾರಿಕೆಯನ್ನು ನಂಬಿ ಬದುಕುತ್ತಿರುವ ಜಿಲ್ಲೆಯ ಎಲ್ಲಾ ರೈತರಿಗೂ ಅನುಕೂಲವಾಗಲಿದೆ ಎಂದು ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಅಭಿಪ್ರಾಯಪಟ್ಟಿದ್ದಾರೆ.