ಸಂಜೆವಾಣಿ ವಾರ್ತೆ
ಹೊಸಪೇಟೆ ಜು24: ವಿಜಯನಗರ ಜಿಲ್ಲೆಯಲ್ಲೀಗ ಕುಡಿಯುವ ನೀರಿಗೆ ಆಧಾರವಾಗಿರುವ ಓವರ್‍ಹೇಡ್ ಟ್ಯಾಂಕ್ ತೊಳೆಯುವ ಅಭಿಯಾನ ಸದ್ದಿಲ್ಲದೇ ಶುರುವಾಗಿದೆ. ನೂತನ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರ ಸೂಚನೆಯಂತೇ ಓವರ್‍ಹೇಡ್ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.
ಈಗ ಮಳೆಗಾಲ ಆರಂಭವಾಗಿದ್ದು, ಹೊಸ ನೀರು ಕೂಡ ಬರುತ್ತಿದೆ. ಇನ್ನೂ ಈ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸಲು ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಹಾಗಾಗಿ ಹಲವು ರೋಗಗಳು ಈ ಟ್ಯಾಂಕ್‍ಗಳಿಂದಲೇ ಬರುತ್ತವೆ ಎಂಬುದನ್ನು ಮನಗಂಡಿರುವ ಜಿಲ್ಲಾಧಿಕಾರಿ ಈ ಕೂಡಲೇ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸಲು ಸೂಚನೆ ನೀಡಿದ್ದರು. ಅವರ ಸೂಚನೆಯಂತೇ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಟ್ಯಾಂಕ್‍ಗಳನ್ನು ತೊಳೆಯಲಾಗುತ್ತಿದೆ.
ತುಂಗಭದ್ರಾ ಜಲಾಶಯ, ಕೆರೆ ಸೇರಿದಂತೆ ವಿವಿಧ ಜಲ ಮೂಲಗಳಿಂದ ಕುಡಿಯುವ ನೀರು ಪಡೆಯಲಾಗುತ್ತಿದೆ. ನೀರು ಶುದ್ಧೀಕರಣ ಕೂಡ ಮಾಡಲಾಗುತ್ತಿದೆ. ಆದರೆ, ಶುದ್ಧೀಕರಣ ಮಾಡಿದ ಬಳಿಕ ನೀರನ್ನು ನೇರ ಟ್ಯಾಂಕ್‍ಗೆ ಬಿಟ್ಟಾಗ ಟ್ಯಾಂಕ್‍ಗಳು ಮಲಿನವಾಗಿರುತ್ತವೆ. ಹಾಗಾಗಿ ಟ್ಯಾಂಕ್‍ಗಳು ಸ್ವಚ್ಛತೆ ಇಲ್ಲದೇ ಜನರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿದ ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ ಕುಡಿಯುವ ನೀರಿಗೆ ಆದ್ಯತೆ ನೀಡಲು ತಿಳಿಸಿದ್ದಾರೆ. ಬರೀ ನೀರು ನೀಡಿದರೆ ಸಾಲದು, ಟ್ಯಾಂಕ್‍ಗಳನ್ನು ಕೂಡ ಕಾಲ ಕಾಲಕ್ಕೆ ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದ್ದಾರೆ. ಹಾಗಾಗಿ ಈಗ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.
ನೀರಿನ ಟ್ಯಾಂಕ್‍ಗಳನ್ನು ಕಡ್ಡಾಯವಾಗಿ ಕ್ಲೀನ್ ಮಾಡಿ, ಕ್ಲೋರಿನೇಷನ್ ಮಾಡಲು ಸೂಚಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ.