ಕುಡಿಯುವ ನೀರಿನ ಘಟಕ, ತೊಟ್ಟಿಗಳ ಸ್ವಚ್ಛತೆಗೆ ಅಭಿಯಾನ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 5 :- ಕಲುಷಿತ ನೀರಿನ ಸೇವನೆಯಿಂದ ವಾಂತಿ ಭೇಧಿ ಪ್ರಕರಣಗಳು ತಾಲೂಕಿನಲ್ಲಿ ಗೋಚರಿಸಿದಂತೆ ಹಾಗೂ ಪಕ್ಕದ ಜಿಲ್ಲೆಗಳ ಪ್ರಕರಣ ಕಂಡುಬರುತ್ತಿರುವ ಹಿನ್ನೆಲೆಯ ಬಗ್ಗೆ ಪತ್ರಿಕಾ ವರದಿಗಳನ್ನು ಆಧಾರಿಸಿ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ತಾವೊಬ್ಬ ವೈದ್ಯರಾಗಿ ಕ್ಷೇತ್ರದ ಜನರ ಆರೋಗ್ಯ ಹಿತದೃಷ್ಠಿ ಕಾಪಾಡುವ ನಿಟ್ಟಿನಲ್ಲಿ ಕೂಡ್ಲಿಗಿ ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿಯ ಗ್ರಾಮಗಳಲ್ಲಿನ ಓಹೆಚ್ ಟಿ, ಕಿರುನೀರು  ಸರಬರಾಜು ಘಟಕ ಹಾಗೂ ಜಾನುವಾರುಗಳ ತೊಟ್ಟಿಗಳ ಸ್ವಚ್ಛತೆಗೊಳಿಸಲು ಅಭಿಯಾನವನ್ನು ಬರುವ ಸೋಮವಾರ ಹಾಗೂ ಮಂಗಳವಾರ ಆಯೋಜಿಸಲು ನಿರ್ದೇಶಿಸಿದ್ದಾರೆ.
ಗ್ರಾಮಪಂಚಾಯಿತಿ ಅಧೀನದಲ್ಲಿ ಬರುವ ಓಹೆಚ್ ಟಿ, ಕಿರುನೀರು ಸರಬರಾಜು ಘಟಕ ಮತ್ತು ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿಗಳನ್ನು ಮೂರು ತಿಂಗಳಿಗೊಮ್ಮೆ ಬ್ಲೀಚಿಂಗ್ ಪೌಡರ್ ಬಳಸಿ ಅವುಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಗುಣಮಟ್ಟದ ನೀರನ್ನು ಪೂರೈಸುವುದು ಹಾಗೂ ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡುವುದು ಗ್ರಾಮಪಂಚಾಯಿತಿಯ  ಆದ್ಯಕರ್ತವ್ಯವಾಗಿದ್ದರೂ ಅದನ್ನು ಸಮರ್ಪಕ ರೀತಿಯಲ್ಲಿ ಆಗುತ್ತಿಲ್ಲ ಎನ್ನುವ ಬಗ್ಗೆ ಶಾಸಕರು, ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಿಸುತ್ತಿರುವಂತೆ ಹಾಗೂ ಇತರೆ ಪಕ್ಕದ  ಜಿಲ್ಲೆಯ ತಾಲೂಕುಗಳಲ್ಲಿ ಕಲುಷಿತ ನೀರಿನ ಸೇವನೆಯಿಂದ ಅಸ್ವಸ್ಥ ಹಾಗೂ ಸಾವಿನ ಪ್ರಕರಣಗಳು ಕಂಡು ಬಂದಿರುವ ಬಗ್ಗೆ  ಪತ್ರಿಕೆಗಳ ವರದಿಯಂತೆ ಹಾಗೂ  ನಮ್ಮ ಕೂಡ್ಲಿಗಿ ಕ್ಷೇತ್ರದ ಬಡೇಲಡಕು ಗ್ರಾಮಪಂಚಾಯಿತಿಯಲ್ಲಿ ಕಲುಷಿತ ನೀರು ಕುಡಿದ ಪರಿಣಾಮ ಕೆಲದಿನದ ಹಿಂದೆ ವಾಂತಿ ಭೇದಿ ಪ್ರಕರಣ ಕಂಡು ಬಂದೋದ ಪತ್ರಿಕೆಗಳ ವರದಿ ಆಧಾರಿಸಿಕೊಂಡು ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ ಶ್ರೀನಿವಾಸ ಎನ್ ಟಿ ಅವರು ನಿರ್ದೇಶಸಿದಂತೆ ಕೂಡ್ಲಿಗಿ ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನೇತೃತ್ವವಹಿಸಿಕೊಂಡು ನೀರಗಂಟಿಗಳು ಹಾಗೂ ಸ್ವಚ್ಛತಾಗಾರರನ್ನು ಬಳಸಿಕೊಂಡು ಬರುವ ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಅಭಿಯಾನ ನಡೆಸುವ ಮೂಲಕ ಓಹೆಚ್ ಟಿ, ಕಿರುನೀರು ಸರಬರಾಜು ಘಟಕ ಹಾಗೂ ಜಾನುವಾರುಗಳ ತೊಟ್ಟಿಗಳನ್ನು ಬ್ಲೀಚಿಂಗ್ ಬಳಸಿ ಸ್ವಚ್ಛಗೊಳಿಸುವಂತೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ನಿರ್ದೇಶನದಂತೆ ಕೂಡ್ಲಿಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅವರು ಎಲ್ಲಾ ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಶುಕ್ರವಾರದಂದು  ಅಧಿಕೃತ ಜ್ಞಾಪನ ಪತ್ರದ ಮೂಲಕ ಆದೇಶಿಸಿದ್ದಾರೆ.