ಸಂಜೆವಾಣಿ ವಾರ್ತೆ
ಕುರುಗೋಡು, ಜು.13- ಇಂದು ಕುರುಗೋಡು ಪಟ್ಟಣದಲ್ಲಿ ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ಕಲ್ಲುಕಂಬ, ಕೇರಿಕೆರೆ, ಲಕ್ಷ್ಮೀಪುರ ಮತ್ತು ಶ್ರೀನಿವಾಸ್ ನಗರ ಗ್ರಾಮಕ್ಕೆ ಸಂಬಂಧಿಸಿದ ಕೆರೆಯನ್ನು ರಿಪೇರಿ ಮಾಡಿ, ಶುದ್ಧ ನೀರನ್ನು ಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯಿತು.
ಕುರುಗೋಡು ತಾಲೂಕಿನ ಕಲ್ಲುಕಂಭ, ಕೆರೆಕೆರೆ, ಲಕ್ಷ್ಮೀಪುರ ಹಾಗೂ ಶ್ರೀನಿವಾಸ ಕ್ಯಾಂಪ್‌ಗಳಿಗೆ ಕುಡಿಯುವ ನೀರಿನ ಮೂಲವಾದ ಕೆರೆ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿ ಹೋಗಿದ್ದು, ಈಗ ಈ ಗ್ರಾಮಗಳ ಜನತೆ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ.
ಇಂದು ಹಾಳಾಗಿ ಅದ್ವಾನಗೊಂಡಿರುವ ಈ ಕೆರೆಗಾಗಿ ಕಳೆದ ಒಂದು ದಶಕದ ಹಿಂದೆ, ಸದರಿ ನಾಲ್ಕು ಗ್ರಾಮಗಳ ಜನತೆ ಹೋರಾಟ ಮಾಡಿ ಪಡೆದುಕೊಂಡಿದ್ದರು. ಆದರೆ ಇತ್ತೀಚಿನ 3-4 ವರ್ಷಗಳಿಂದ ಕೆರೆಯ ಸೂಕ್ತ ನಿರ್ವಹಣೆ ಇಲ್ಲದೇ ಕಲುಷಿತಗೊಂಡು ಕುಡಿಯಲಿಕ್ಕೆ ಬಳಸಲು ಅಲ್ಲಿನ ನೀರು ಅಯೋಗ್ಯವಾಗಿದೆ.
ಈ ಸಮಸ್ಯೆ ಕುರಿತು ಹತ್ತಾರು ಬಾರಿ ಕಲ್ಲುಕಂಭ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕಳೆದ ವರ್ಷ ಕಲ್ಲುಕಂಭ ಗ್ರಾಮದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಹೂಡಿದ ಸಂದರ್ಭದಲ್ಲಿಯೂ ಗ್ರಾಮಸ್ಥರು ಈ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಫಲಪ್ರದವಾಗಲಿಲ್ಲ.
ಪ್ರಸ್ತುತ ಈ ಕೆರೆಯು ಸೂಕ್ತ ಕಾಳಜಿ ಹಾಗೂ ನಿರ್ವಹಣೆಯ ಕೊರೆತೆಯಿಂದ ದನಕರು ಮತ್ತು ಪ್ರಾಣಿಗಳ ವಾಸಸ್ಥಳವಾಗಿದೆ. ಪರಿಣಾಮವಾಗಿ ಸದರಿ ನಾಲ್ಕು ಗ್ರಾಮಗಳ ಜನತೆ ಶುದ್ಧ ಕುಡಿಯುವ ನೀರಿಗಾಗಿ ದಿನಂಪ್ರತಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಂದರ್ಭದಲ್ಲಿ ಜನತೆ ತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ಹೋರಾಟ ಮಾಡುವುದು ಬಿಟ್ಟು ಬೆರೆ ಮಾರ್ಗ ಕಾಣದಾಗಿದೆ. ಹಾಗಾಗಿ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತವಾಗಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಹೆಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಗೋವಿಂದ್ , ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ರೈತ ಜಿಲ್ಲಾ ಸಮಿತಿ ಸದಸ್ಯ ನಿಂಗಪ್ಪ, ಬಸವರಾಜ್, ರಮೇಶ್ , ಡಿ.ಕಾಳಿಂಗಪ್ಪ, ಬಸವರಾಜ್ ಎಸ್, ವಿ.ಎಂ ಗಾದಿ, ಕೆ.ಕರಿಗೂಳಿ,ಹುಲಿರಾಜ್, ಶಿವಪ್ಪ, ದ್ಯಾವಣ್ಣ ಸೇರಿದಂತೆ ಇತರರು ಇದ್ದರು.