ಕುಡಿಯುವ ನೀರಿನ ಕೆರೆಗೆ ಶಾಸಕ ಭೇಟಿ

ಮಾನ್ವಿ:ಏ.೨೭ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ರಬ್ಬಣಕಲ್ ಹತ್ತಿರದ ಕೆರೆಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಇಂದು ಭೇಟಿ ಮಾಡಿ ಬೇಸಿಗೆಯಲ್ಲಿ ಪಟ್ಟಣದ ಜನತೆಗೆ ನೀರಿನ ತೊಂದರೆಯಾಗದಂತೆ ಸೂಕ್ರ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಂತರ ಮಾತನಾಡಿದ ಅವರು ಕಳೆದ ಬಾರಿ ಐಸಿಸಿ ಸಭೆಯಲ್ಲಿ ನಿರ್ಣಯಿಸಿದಂತೆ ಕಳೆದ ಬೇಸಿಗೆಯಲ್ಲಿ ಹಾಗೂ ಈ ಬಾರಿಯೂ ಕೂಡ ತುಂಗಭದ್ರ ನದಿಯಿಂದ ಕಾಲುವೆ ಮೂಲಕ ಕೆರೆಗೆ ನೀರನ್ನು ತುಂಬಿಸಲಾಗಿದೆ ಕಳೆದಬಾರಿ ೬.೯ ಅಡಿ ನೀರನ್ನು ತುಂಬಿಸಲಾಗಿತ್ತು. ಈ ಬಾರಿ ೭.೨ ಅಡಿ ನೀರನ್ನು ತುಂಬಿಸುವ ಮೂಲಕ ಕೆರೆಯನ್ನು ಭರ್ತಿ ಮಾಡಲಾಗಿದೆ. ಇದರಿಂದ ಪಟ್ಟಣಕ್ಕೆ ಬೇಸಿಗೆಯಲ್ಲಿ ನೀರಿನ ತೊಂದರೆಯಾಗದಂತೆ ಪ್ರತಿ ದಿನ ನೀರು ಸರಬರಾಜು ಮಾಡುವ ಬಗ್ಗೆ ಕ್ರಮಕೈಗೊಳ್ಳಲು ಪುರಸಭೆ ಮತ್ತು ಕಾರ್ನಾಟಕ ಕುಡಿಯುವ ನೀರು ಸರಬರಾಜು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೆರೆ ನಿರ್ಮಾಣ ಕಾಮಗಾರಿಗೆ ೮೦ ಕೋಟಿ ರೂ. ಮಂಜೂರು ಮಾಡಲಾಗಿತ್ತು. ಇನ್ನೂ ಬಾಕಿ ಕೆರೆ ಕಾಮಗಾರಿಯನ್ನು ಅದಷ್ಟು ಬೇಗನೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ ೧೭ಕೋಟಿ ರೂ. ವೆಚ್ಚದ ಕಾತರಕಿ ನದಿಯಿಂದ ಕೆರೆಗೆ ಪೈಪ್ ಲೈನ್ ಮೂಲಕ ನದಿ ನೀರನ್ನು ಕೂಡ ತುಂಬಿಸುವ ವ್ಯವಸ್ಥೆ ಮಾಡಲಾಗುತ್ತದೆ. ಅದೇ ರೀತಿಯಾಗಿ ರಬ್ಬಣಕಲ್ ಹಳೆಯ ಪಂಪ್ ಹೌಸ್ ದುರಸ್ತಿಗಾಗಿ ೧ಕೋಟಿ ರೂ. ನಗರೋತ್ಥಾನ ಅನುದಾನವನ್ನು ಮೀಸಲಿಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಯುವ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಪುರಸಭೆ ಸದಸ್ಯರಾದ ಬಾಷಾ ಸಾಬ್, ಶರಣಪ್ಪ ಮೇದಾ, ಜೆಡಿಎಸ್ ಮುಖಂಡರಾದ ಖಲೀಲ್ ಖುರೇಶಿ,ಹನುಮಂತ ಭೋವಿ, ನಾಗರಾಜ ಶೆಟ್ಟಿ, ಅಮರೇಗೌಡ ಬುದ್ದಿನ್ನಿ, ಮೌಲಸಾಬ್, ಅಮರೇಶ ನಾಯಕ ಬ್ಯಗವಾಟ್, ಶರಣಯ್ಯಸ್ವಾಮಿ ಬ್ಯಾಗವಾಟ್, ಬೆಟ್ಟಪ್ಪ ನಾಯಕ ಹಾಗೂ ಪುರಸಭೆ ಮುಖ್ಯಾಧಿಕಾರಿ ಜಗದೀಶ ಭಂಡಾರಿ, ಕರ್ನಾಟಕ ಕುಡಿಯುವ ನೀರು ಸರಭರಾಜು ಎಇಇ ಸಿ.ಎಚ್.ಚೌವ್ಹಣ್, ಎಇ ಪಂಚಮುಖಿ ಇದ್ದರು.