ಕುಡಿಯುವ ನೀರಿನ ಕೆರೆಖಾಲಿ : ರೈತರ ಬೋರ್‍ವೆಲ್‍ನಿಂದ ಕೆರೆ ಭರ್ತಿಗೆ ಹರಸಹಾಸ

ಸಿರುಗುಪ್ಪ ಮೇ 29 : ತಾಲೂಕಿನ 64-ಹಳೇಕೋಟೆ ಗ್ರಾಮದ ಕುಡಿಯುವ ನೀರಿನ ಕೆರೆ ಕಳೆದ 15ದಿನಗಳಿಂದ ಖಾಲಿಯಾಗಿದ್ದು, ನೀರಿಗಾಗಿ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಚ್ಚೆತ್ತುಕೊಂಡ ಗ್ರಾ.ಪಂ. ಅಧ್ಯಕ್ಷರು ಮತ್ತು ಗ್ರಾಮದ ಮುಖಂಡರು ಸೇರಿ ಬೋರ್‍ವೆಲ್‍ಗಳಿಂದ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೇಸಿಗೆ ಕಾಲದಲ್ಲಿ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಶಾಸಕ ಎಂ.ಎಸ್.ಸೋಮಲಿಂಗಪ್ಪ ಪ್ರತ್ಯೇಕವಾಗಿ ಅಧಿಕಾರಿಗಳ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಬೇಸಿಗೆ ಪ್ರಾರಂಭಕ್ಕೂ ಮುನ್ನವೆ ಎಲ್ಲಾ ಕೆರೆಗಳನ್ನು ಭರ್ತಿಮಾಡಬೇಕೆಂದು ಎಚ್ಚರಿಸಿದರೂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಕೆರೆಗೆ ನೀರು ತುಂಬಿಸದೆ ತಾಲೂಕಿನ ಹಳೇಕೋಟೆಯ ಕೆರೆಯ ನೀರು ಖಾಲಿಯಾಗಿರುವುದು ಅಧಿಕಾರಿಗಳ ನಿರ್ಲಕ್ಷತೆಗೆ ಸಾಕ್ಷಿಯಾದಂತಾಗಿದೆ.
ತಾಲೂಕಿನಲ್ಲಿ ಹರಿಯುವ ಬಾಗೇವಾಡಿ ಕಾಲುವೆಯ ಪಕ್ಕದಲ್ಲಿಯೇ ಹಳೇಕೋಟೆಯ ಕೆರೆ ಇದ್ದು, ಸರಿಯಾದ ಸಮಯದಲ್ಲಿ ಕೆರೆಗೆ ನೀರು ತುಂಬಿಸಿಕೊಳ್ಳದೇ ಇರುವುದರಿಂದ ಇಂದು ಕೆರೆಯಲ್ಲಿ ನೀರು ಖಾಲಿಯಾಗಿ ಗ್ರಾಮಸ್ಥರಿಗೆ ಕುಡಿಯುವ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಗ್ರಾಮದ ಕೆರೆಯಲ್ಲಿ ನೀರು ಖಾಲಿಯಾಗಿ ಗ್ರಾಮಸ್ಥರಿಗೆ ಆಗಿರುವ ನೀರಿನ ತೊಂದರೆಯನ್ನು ನಿವಾರಿಸಲು ಗ್ರಾ.ಪಂ.ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮದ ಮುಖಂಡರು ಸೇರಿ ಕೆರೆಯ ಅಕ್ಕಪಕ್ಕದ ಹೊಲಗಳಲ್ಲಿರುವ 8 ಬೋರ್‍ವೆಲ್‍ಗಳ ನೀರು ಪಡೆದು ಕೆರೆತುಂಬಿಸಿಕೊಳ್ಳಲು ರೈತರ ಸಹಾಯ ಪಡೆದು, ಕನಿಷ್ಟ 15ರಿಂದ 20 ದಿನಗಳ ವರೆಗೆ ರೈತರಿಂದ ಬೋರ್‍ವೆಲ್‍ಗಳ ನೀರನ್ನು ಪಡೆಯಲು ಅನುಮತಿ ಪಡೆದಿದ್ದು, ಈ ಒಳಗಾಗಿ ಬೋರ್‍ವೆಲ್ ದುರಸ್ಥಿಯಾದರೆ ಸರಿಪಡಿಸಿಕೊಡುವುದಾಗಿ ತಿಳಿಸಿ ಬೋರ್‍ವೆಲ್‍ಗಳ ನೀರನ್ನು ಕಾಲುವೆಗೆ ಹರಿಸಿ ಅಲ್ಲಿಂದ ಕೆರೆ ತುಂಬಿಸುವ ಪ್ರಯತ್ನ ನಡೆದಿದೆ.
ಆದರೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹೇಳುವುದೇ ಬೇರೆಯಾಗಿದೆ. ತಾಲೂಕಿನಲ್ಲಿ ಹರಿಯುವ ಬಾಗೇವಾಡಿ ಕಾಲುವೆಗೆ ಸರಿಯಾಗಿ ನೀರು ಬರುತ್ತಿಲ್ಲ. ಕಾಲುವೆಯ ಮೇಲ್ಭಾಗದ ತೆಕ್ಕಲಕೋಟೆ, ಉಪ್ಪಾರಹೊಸಳ್ಳಿ ಗ್ರಾಮ ದಾಟಿ ಹಳೇಕೋಟೆ ಕಾಲುವೆಗೆ ನೀರು ಬರಬೇಕು. ಈ ಬಗ್ಗೆ ಸಿರಗುಪ್ಪ ಮತ್ತು ತೆಕ್ಕಲಕೊಟೆಯ ಪೊಲೀಸ್ ಠಾಣೆಗೆ ಪೊಲೀಸರ ಸಹಕಾರಕ್ಕಾಗಿ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ನೀರಾವರಿ ಇಲಾಖೆ ಅಧಿಕಾರಿಗಳು ಸರಿಯಾದ ಸಮಯದಲ್ಲಿ ಬಾಗೇವಾಡಿ ಕಾಲುವೆಗೆ ನೀರು ಹರಿಯುವಂತೆ ಮಾಡಿದ್ದರೆ ಕೆರೆಗೆ ನೀರು ತುಂಬಿಸಿಕೊಳ್ಳುತ್ತಿದ್ದೆವು. ಅಲ್ಲದೆ ಈ ವರ್ಷ ಅಣೆಕಟ್ಟೆಯಿಂದಲೇ ಕುಡಿಯುವ ನೀರಿಗಾಗಿ ನೀರು ಬಿಡುಗಡೆಮಾಡಿಲ್ಲ ಎಂದು ಹೇಳುತ್ತಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ಕಾಲುವೆಗೆ ನೀರು ಇದ್ದ ಸಂದರ್ಭದಲ್ಲಿ ಕೆರೆಗೆ ನೀರು ತುಂಬಿಸದೇ ನಿರ್ಲಕ್ಷತೆ ತೋರಿರುವುದರಿಂದ ಇಂದು ಕೆರೆಯಲ್ಲಿ ನೀರು ಖಾಲಿಯಾಗಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಕೆರೆಯ ಅಕ್ಕ ಪಕ್ಕದ ಹೊಲಗಳ ರೈತರ ಮನವಲಿಸಿ ಅವರ ಬೋರ್‍ವೆಲ್‍ಗಳಿಂದ ಕೆರೆಗೆ ನೀರನ್ನು ತುಂಬಿಸಲು ಗ್ರಾ.ಪಂ.ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಮುಖಂಡರು ಪ್ರಯತ್ನಿಸುತ್ತಿದ್ದೇವೆ ಎಂದು ಗ್ರಾ.ಪಂ.ಮಾಜಿ ಅಧ್ಯಕ್ಷ ಶೇಕ್ಷಾವಲಿ ತಿಳಿಸಿದ್ದಾರೆ.
ತಾಲೂಕಿನ ಹಳೇಕೋಟೆ ಗ್ರಾಮದ ಹತ್ತಿರ ಹರಿಯುವ ಬಾಗೇವಾಡಿ ಕಾಲುವೆಗೆ ಸರಿಯಾಗಿ ನೀರು ಬಾರದ ಕಾರಣ ಕೆರೆಗೆ ನೀರು ತುಂಬಿಸಲು ಸಾಧ್ಯವಾಗಿಲ್ಲ. ಗ್ರಾಮದ ಜನರಿಗೆ ನೀರು ಒದಗಿಸಲು ನಮ್ಮ ಇಲಾಖೆ ಎ.ಇ. ಮಂಜುನಾಥರವರು ರೈತರ ಬೋರ್‍ವೆಲ್‍ಗಳ ನೀರನ್ನು ಕೆರೆಗೆ ತುಂಬಿಸಲು ಪೈಪ್‍ಲೈನ್ ವ್ಯವಸ್ಥೆ ಮಾಡಿಸುತ್ತ ಸ್ಥಳದಲ್ಲಿಯೇ ಇದ್ದಾರೆಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಎಸ್.ವೈ.ವಕ್ರಾಣಿ ತಿಳಿಸಿದ್ದಾರೆ.