ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ


ರಾಮದುರ್ಗ,ಜ.9: ವ್ಯಕ್ತಿಯ ಉತ್ತಮ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಅಗತ್ಯವಿದ್ದು ಗ್ರಾಮೀಣ ಜನರಿಗೆ ಒಳ್ಳೆಯ ನೀರು ಪೂರೈಕೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಲಮಿಶನ್ (ಮನೆ ಮನೆಗೆ ಗಂಗೆ) ಯೋಜನೆ ಜಾರಿಗೆ ತಂದಿವೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಘಟಕನೂರದಲ್ಲಿ ರೂ. 73,50 ಲಕ್ಷ ವೆಚ್ಚದಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಮನುಷ್ಯನಿಗೆ ರೋಗ ಬರಲು ನೀರು ಕಾರಣವಾಗಿದ್ದು ಶುದ್ಧ ನೀರು ಕುಡಿಯುವದರಿಂದ ಆಸ್ಪತ್ರೆಯಿಂದ ದೂರವಿರಲು ಸಾಧ್ಯವಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಶುದ್ಧ ನೀರಿಗೆ ಪರದಾಡುವ ಪರಿಸ್ಥಿತಿ ಎದುರಾಗಬಹುದು. ನೀರನ್ನು ಮಿತವಾಗಿ ಬಳಕೆ ಮಾಡಬೇಕು ಅನಾವಶ್ಯಕ ನೀರು ಪೋಲಾಗದಂತೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ ಸದಸ್ಯ ರೇಣಪ್ಪ ಸೋಮಗೊಂಡ ಮಾತನಾಡಿ ಸರ್ಕಾರದ ಯೋಜನೆಯ ಯಶಸ್ವಿಗೆ ಗ್ರಾಮಸ್ಥರ ಸಹಕಾರ ಅಗತ್ಯ. ಕಳಪೆ ಕಾಮಗಾರಿಗೆ ಅವಕಾಶ ನೀಡದೆ ನಳ ಜೋಡಣೆ ಸಂದರ್ಭದಲ್ಲಿ ಗುಣಮಟ್ಟದ ಸಾಮಗ್ರಿ ಬಳಕೆ ಮಾಡಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ತಾಲೂಕಿನ ಹುಲಿಗೊಪ್ಪ ರೂ, 32,70 ಲಕ್ಷ, ಕೊಳಚಿ ರೂ. 18.90 ಲಕ್ಷ, ಚಿಂಚಕಂಡಿ ರೂ, 25 ಲಕ್ಷ, ಇಡಗಲ್ ರೂ. 27 ಲಕ್ಷ ಹಾಗೂ ಲಿಂಗದಾಳ ರೂ. 46,95 ಲಕ್ಷ ಕಾಮಗಾರಿಗಳಿಗೆ ಕೂಡಾ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಿವಾಸ್ ವಿಶ್ವಕರ್ಮ, ಸಹಾಯಕ ಅಭಿಯಂತರ ಮಹಾಂತೇಶ ಚೌಗಲಾ, ಪ್ರತಾಪ, ಗುತ್ತಿಗೆದಾರರಾದ ರಮೇಶ ಕಮ್ಮಾರ, ರಾಮು ಲಮಾಣಿ, ಮಲ್ಲಿಕಾರ್ಜುನ ಧುಪದ, ಶಾಸಪ್ಪ ಅವರಾದಿ ಹಾಗೂ ಇತರರು ಉಪಸ್ಥಿತರಿದ್ದರು.