ಕುಡಿಯುವ ನೀರಿಗೆ ಮೊದಲ ಆದ್ಯತೆ : ಸಚಿವ ಗೋಪಾಲಯ್ಯ

ತುಮಕೂರು, ಜು. ೧೬- ಹೇಮಾವತಿ ನೀರನ್ನು ಜನಸಾಮಾನ್ಯರಿಗೆ ಕುಡಿಯುವ ನೀರು ಪೂರೈಸುವ ಕೆರೆಗಳಿಗೆ ಹರಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಇಂದಿಲ್ಲಿ ತಿಳಿಸಿದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಸೋಪ್ ಕಾರ್ಖಾನೆ ಮುಂಭಾಗದಲ್ಲಿ ಜೂ. ೧೭ ರಂದು ಹಮ್ಮಿಕೊಂಡಿರುವ ಬಸವಣ್ಣ ಉದ್ಯಾನವನ ಹಾಗೂ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಗೆ ಆಹ್ವಾನ ಪತ್ರಿಕೆ ನೀಡಿ ಆಶೀರ್ವಾದ ಪಡೆದ ನಂತರ ಮಾತನಾಡಿದ ಅವರು, ಮೊನ್ನೆ ಶ್ರೀಮಠಕ್ಕೆ ಬಂದಿದ್ದ ಸಂದರ್ಭದಲ್ಲಿ ಶ್ರೀಗಳು ಬುಗುಡನಹಳ್ಳಿ ಕೆರೆಗೆ ಕೂಡಲೇ ಹೇಮಾವತಿ ನೀರು ಹರಿಸುವಂತೆ ಶ್ರೀಗಳು ಸೂಚನೆ ನೀಡಿದ್ದರು. ಅದರಂತೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಹೇಮಾವತಿ ಜಲಾಶಯದಿಂದ ನೀರು ಜಿಲ್ಲೆಗೆ ಹರಿಸಲಾಗಿದ್ದು, ನಿನ್ನೆ ಬುಗುಡನಹಳ್ಳಿಗೆ ಹೇಮಾವತಿ ಬಂದು ತಲುಪಿದೆ ಎಂದರು.
ತುಮಕೂರು ಜಿಲ್ಲೆ ಸೇರಿದಂತೆ ಹೇಮಾವತಿ ಎಲ್ಲೆಲ್ಲಿ ಹರಿಯುತ್ತದೆಯೇ ಅಂತಹ ಕಡೆಗಳಲ್ಲಿ ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡುವುದು ನಮ್ಮ ಕರ್ತವ್ಯ. ಹಾಗಾಗಿಯೇ ಮೊದಲು ಕುಡಿಯುವ ನೀರು ಒದಗಿಸಲಾಗುವುದು. ಈಗಾಗಲೇ ಮಳೆಯಿಂದಾಗಿ ಬಹುತೇಕ ಕೆರೆಗಳು ತುಂಬಿವೆ. ಹಾಗಾಗಿ ಕೆರೆಗಳಿಗೆ ಹೆಚ್ಚು ನೀರು ಬಿಡುವ ಅಗತ್ಯ ಇರುವುದಿಲ್ಲ. ಜನಸಾಮಾನ್ಯರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಯಾವ ಯಾವ ಕೆರೆಗಳಿಗೆ ಹೇಮಾವತಿ ನೀರು ನೀರು ಹರಿಸಬೇಕೋ ಆ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಅವರು ಹೇಳಿದರು.
ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಗೆಲುವು ನಿಶ್ಚಿತವಾಗಿದೆ. ನಮ್ಮೆಲ್ಲರ ಬೆಂಬಲವೂ ಅವರ ಪರವಾಗಿದೆ. ಮುರ್ಮು ಅವರೇ ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆಯಾಗಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಬಕಾರಿ ಡಿವೈಎಸ್ಪಿ ಸಿದ್ದಲಿಂಗ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.