ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಸಚಿವರ ಸೂಚನೆ*

ಶಿವಮೊಗ್ಗ, ಜೂ.4: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್.ಮಧು ಬಂಗಾರಪ್ಪ ಅಧಿಕಾರಿಗಳಿಗೆ ತಿಳಿಸಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಚಿವರು, ಅಧಿಕಾರಿಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಹೋಬಳಿವಾರು ನೀರಿನ ಸಮಸ್ಯೆ ಇರುವ ಹಳ್ಳಿಗಳ ಪಟ್ಟಿ ಮಾಡಬೇಕು. ಸಿಇಓ ಅವರು ಸಮಸ್ಯಾತ್ಮಕ ಹಳ್ಳಿಗಳ ವರದಿ ಸಿದ್ದಪಡಿಸಿ ಕುಡಿಯುವ ನೀರಿಗೆ ಕಿಂಚಿತ್ತೂ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಜಿಲ್ಲೆಯಲ್ಲಿ 2818 ಸರ್ಕಾರಿ ಶಾಲೆಗಳಿವೆ. ಇದರಲ್ಲಿ 0 ಶಿಕ್ಷಕರಿರುವ ಶಾಲೆಗಳು ಒಟ್ಟು 136 ಇವೆ. ಸಾಗರ ತಾಲ್ಲೂಕಿನಲ್ಲೇ 52 ಶಾಲೆಯಲ್ಲಿ ಶಿಕ್ಷಕರಿಲ್ಲ. ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಈ ಕುರಿತು ಡಿಡಿಪಿಐ ಅವರು ಹೆಚ್ಚಿನ ಗಮನ ಹರಿಸಬೇಕು. ಮುಂಬರುವ ವರ್ಗಾವಣೆ ಕೌನ್ಸೆಲಿಂಗ್‍ನಲ್ಲಿ ಈ ಪ್ರದೇಶಗಳಿಗೆ ಶಿಕ್ಷಕರು ವರ್ಗಾವಣೆಯಾಗುವಂತೆ, ಇತರೆಡೆ ನಿಯೋಜನೆಗೊಂಡ ಶಿಕ್ಷಕರನ್ನು ಇಲ್ಲಿ ನಿಯೋಜಿಸುವಂತೆ ಹಾಗೂ ಅತಿಥಿ ಶಿಕ್ಷಕರನ್ನು ಇಲ್ಲಿ ನಿಯೋಜಿಸುವ ಮೂಲಕ ಇಲ್ಲಿ ಶಿಕ್ಷಕರನ್ನು ನೇಮಿಸಿ ಶಾಲೆಗಳು ನಡೆಯುವಂತೆ ನೋಡಿಕೊಳ್ಳಬೇಕು. ತಾವು ಸಹ ಸರ್ಕಾರದ ಹಂತದಲ್ಲಿ ಈ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿದರು.ಡಿಡಿಪಿಐ ಮಾತನಾಡಿ, 167 ಪ್ರೌಢಶಾಲಾ ಶಿಕ್ಷಕರು, 1009 ಪ್ರಾಥಮಿಕ ಶಿಕ್ಷಕರ ಹುದ್ದೆ ಖಾಲಿ ಇದೆ. ಪ್ರಾಥಮಿಕ ಶಾಲೆಗೆ 1031 ಮತ್ತು ಪ್ರೌಢಶಾಲೆ 108 ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ನೀಡಲಾಗಿದೆ. ಈಗಾಗಲೇ 448 ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಶಾಲೆಗಳಲ್ಲಿ ಪಠ್ಯ, ಸಮವಸ್ತ್ರ ವಿತರಣೆಯಾಗಿದೆ ಎಂದರು.