ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ

ಕೆ.ಆರ್.ಪುರ,ಫೆ.೬- ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿಗೆ ತಾತ್ವಾರ ಉಂಟಾಗಿದ್ದು ವರ್ತೂರು ಸುತ್ತಮುತ್ತಲ ಗ್ರಾಮಸ್ಥರು ವಾರ್ಡನ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಹಲವು ವರ್ಷಗಳಿಂದ ಕುಡಿಯುವ ನೀರಿಗೆ ಅಭಾವವಿದೆ, ಆದರೇ ವರ್ಷಗಳು ಕಳೆದರೂ ಕುಡಿಯುವ ನೀರಿನ ಬವಣೆ ಕಡಿಮೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇತ್ತ ರೊಚ್ಚಿಗೆದ್ದ ಜನ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ.
ಸ್ವಾಭಿಮಾನಿ ಬಳಗದ ಅಧ್ಯಕ್ಷ ಕುಪ್ಪಿ ಮಂಜುನಾಥ್ ಮಾತನಾಡಿ, ಹಿಂದೆ ೫೦೦೦ ಜನಸಂಖ್ಯೆ ಒಳಗೊಂಡಿದ್ದ ವರ್ತೂರು ಭಾಗದಲ್ಲಿ ಎರಡು ಬೋರ್‌ವೆಲ್‌ಗಳು ಜನರ ನೀರಿನ ಬವಣಿಯನ್ನು ನೀಗಿಸುತ್ತಿತ್ತು. ಬೆಂಗಳೂರು ಬೆಳೆದಂತೆ ವರ್ತೂರು ಭಾಗವು ಸಾಕಷ್ಟು ಅಭಿವೃದ್ಧಿಯನ್ನು ಕಂಡಿದ್ದು ಜನಸಂಖ್ಯೆ ಹೇರಳವಾಗಿ ಹೆಚ್ಚಾಗಿದೆ, ಇದರಿಂದ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗಿ ಜನ ಹೈರಾಣಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ತೂರಿನ ಭಾಗದಲ್ಲಿ ೨೫,೦೦೦ಕ್ಕೂ ಹೆಚ್ಚು ಜನಸಂಖ್ಯೆ ಹೆಚ್ಚಾಗಿದೆ,ಬೋರ್ ವೆಲ್ ಗಳನ್ನು ಕೊರೆಯುವ ಬದಲು ಈ ಹಿಂದೆ ೨೦೧೩ ರಿಂದ ೨೦೧೮ರ ಸಿದ್ಧರಾಮಯ್ಯನವರ ಕಾಲಾವಧಿಯಲ್ಲಿ ಅನುಷ್ಠಾನಗೊಂಡಿದ್ದ ಕಾವೇರಿ ನೀರಿನ ಪೂರೈಕೆ ಕಾಮಗಾರಿಯನ್ನು ಸಂಪೂರ್ಣಗೊಳಿಸಬೇಕಾಗಿದೆ. ಕುಡಿಯುವ ನೀರಿಗೂ ಇಷ್ಟು ಹಾಹಾಕಾರ ಹೆಚ್ಚಾದರೆ ಬಡ ಹಾಗೂ ಮಾಧ್ಯಮ ವರ್ಗದ ಜನರ ಜೀವನ ದುಸ್ತರವಾಗುತ್ತೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಕುಮಾರ್, ವರಪುರಿ ನಾರಾಯಣಸ್ವಾಮಿ, ಜೆಕೆ ರವಿ, ಶ್ರೀನಿವಾಸ್, ಜಗದೀಶ್ ರೆಡ್ಡಿ, ರವಿಶಂಕರ್, ಸರೋಜ, ಲಕ್ಷ್ಮೀಗೋಪಾಲ್ ರಾವ್, ಮಂಜಳಾ ಇದ್ದರು.