ಕುಡಿಯುವ ನೀರಿಗಾಗಿ ಆಗ್ರಹಿಸಿ ಗ್ರಾಪಂ ಕಚೇರಿಗೆ ಮುತ್ತಿಗೆ

ಲಕ್ಷ್ಮೇಶ್ವರ,ಸೆ14 ಸಮೀಪದ ಮಾಡಳ್ಳಿ ಗ್ರಾಮದಲ್ಲಿನ ವಾರ್ಡ್ ನಂ1 ಕ್ಕೆ ಸಮಪರ್ಕವಾಗಿ ನೀರು ಪೂರೈಸುವಂತೆ ಆಗ್ರಹಿಸಿ ಗ್ರಾಮಸ್ಥರು ಕೊಡಗಳೊಂದಿಗೆ ಗ್ರಾಪಂ ಕಚೇರಿಗೆ ಮುತ್ತಿಗೆ ಪ್ರತಿಭಟನೆ ಮಾಡಿರುವ ಘಟನೆ ಮಂಗಳವಾರ ನಡೆಯಿತು.
ಈ ವೇಳೆ ಅಶೋಕ ಕೊಟ್ಟೂರಶೆಟ್ಟರ ಮಾತನಾಡಿ ಕಳೆದ 20 ದಿನಗಳಿಂದ ನಮ್ಮ ಮನೆಗಳಿಗೆ ಕುಡಿಯುವ ನೀರು ಬರುತ್ತಿಲ್ಲ, ಈ ಕುರಿತು ಹಲವು ಬಾರಿ ಗ್ರಾಪಂ ಅಧ್ಯಕ್ಷರಿಗೆ ಹಾಗೂ ಪಿಡಿಓ ಅವರಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ, ಗ್ರಾಮಕ್ಕೆ ನೀರು ಪೂರೈಸುವ ಕೊಳವೆ ಬಾವಿಗಳು ಹಾಗೂ ಶುದ್ದ ಕುಡಿಯುವ ನೀರಿನ ಘಟಕ ಕರಟ್ಟು ಹೋಗಿದ್ದರೂ ಅವುಗಳನ್ನು ರಿಪೇರಿ ಮಾಡುವ ಗೋಜಿಗೆ ಹೋಗಿಲ್ಲ, ಕುಡಿಯುವ ನೀರು ಯಾವಾಗ ಕೊಡುತ್ತೀರಿ ಎಂದು ಕೇಳಿದರೆ ನಾಳೆ ಎಂಬ ಉತ್ತರ ನೀಡುತ್ತಾರೆ. ಆದರೆ ಕಳೆದ 20 ದಿನಗಳಿಂದ ಗಲೀಜು ನೀರು ಕುಡಿಯುವುದರಿಂದ ಅನಾರೋಗ್ಯಕ್ಕೆ ತುತ್ತಾಗಿ ಹಲವರು ಆಸ್ಪತ್ರೆ ಸೇರಿರುವ ಘಟನೆಗಳು ನಡೆದಿದೆ. ಇಷ್ಟಾದರೂ ಗ್ರಾಪಂ ಆಡಳಿತ ಮಂಡಳಿಯು ಹಾಗೂ ಗ್ರಾಪಂ ಪಿಡಿಓ ಅವರು ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇವಕ್ಕ ಕೋಷ್ಟಿ ಅವರು ಮಾತನಾಡಿ ಕಳೆದ 20 ದಿನಗಳಿಂದ ನಮ್ಮ ವಾರ್ಡಿಗೆ ನೀರು ಬರುತ್ತಿಲ್ಲ, ಈಗ ಕೊಡ ಹಿಡಿದು ಪಂಚಾಯತಿಗೆ ಬರುವಾಂಗ ಆಗೈತಿ ನೋಡ್ರಿ, ಮನ್ಯಾಗ ಗಂಡ ಮಕ್ಕಳಿಗೆ ಅಡಗಿ ಮಾಡೋದು ಬಿಟ್ಟು ನೀರು ಹಿಡಿಯಾಕ ಅಲಿಯೋದು ಆಗೈತಿ ನೋಡ್ರಿ, ಗ್ರಾಪಂ ಅಧ್ಯಕ್ಷರು ನೀರು ಕೇಳಿದರ ನಮ್ಮ ಜೊತೆ ನ್ಯಾಯಕ್ಕ ಬರ್ತಾರ, ಹೀಂಗಾದ್ರ ಹ್ಯಾಂಗ್ರಿ ಇವರಿಗೆ ಓಟು ಹಾಕಿ ಆರಿಸಿ ಕಳಿಸಿದ್ದು ನಮ್ಮ ತಪ್ಪಾತು ನೋಡ್ರಿ. ಈಗ ನೀರು ಕೊಡೋ ತನಕಾ ನಾವು ಇಲ್ಲಿಂದ ಮನೀಗೆ ಹೋಗೋದಿಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.
ಈ ವೇಳೆ ಗ್ರಾಪಂ ಪಿಡಿಓ ಮಂಜುನಾಥ ಮಲ್ಲೂರ ಮಾತನಾಡಿ ಗ್ರಾಮದ ಕೊಳವೆ ಬಾವಿ ದುರಸ್ತಿ ಇದ್ದ ಕಾರಣ ಸ್ವಲ್ಪ ತೊಂದರೆಯಾಗಿದೆ. ಈಗ ರಿಪೇರಿ ಮಾಡಲು ಜನರು ಬಂದಿದ್ದಾರೆ, ಅಲ್ಲದೆ ಪೈಪ್‍ಗಳು ಒಡೆದ ಹೋಗಿದ್ದು ಅವುಗಳನ್ನು ದುರಸ್ತಿ ಮಾಡಲು ಮಳೆ ಅಡಚಣೆ ಮಾಡಿದ್ದರಿಂದ ದುರಸ್ತಿ ಮಾಡಿಸಲು ಆಗಿರಲಿಲ್ಲ ಹೀಗಾಗಿ ಸ್ವಲ್ಪ ತೊಂದರೆಯಾಗಿದ್ದು ಶೀಘ್ರದಲ್ಲಿ ದುರಸ್ತಿ ಮಾಡಿ ಜನರಿಗೆ ನೀರು ಕೊಡುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಆರ್.ಎಚ್.ಈರೆಡ್ಡಿ, ಬಿ.ಜಿ.ಜನಗಣ್ಣವರ, ಸಿದ್ದಪ್ಪ ಬಾಗವಾಡ, ಏಕನಾಥ ಈರಡ್ಡಿ, ಯಲ್ಲವ್ವ ಹೂಗಾರ, ಸವಿತಾ ಕೊಟ್ಟೂರಶೆಟ್ಟರ, ಪುಷ್ಪಾ ಗಣಾಚಾರಿ, ದೇವಕ್ಕ ಕೋಷ್ಟಿ ಇದ್ದರು.