
ಕೋಲಾರ,ಏ,೧೨-ಬೇಸಿಗೆಯ ಸುಡು ಬಿಸಲಿಗೆ ಸಾರ್ವಜನಿಕರು ತತ್ತರಿಸಿ ಹೋಗುತ್ತಿರುವ ಸಂದರ್ಭದಲ್ಲಿ ನಗರದ ಶುದ್ದ ಕುಡಿಯುವ ನೀರಿನ ಘಟಕಗಳು ಕಳೆದ ಎರಡು ತಿಂಗಳಿಂದ ಬೀಗ ಜಡಿದ್ದರು ಸಂಬಂಧ ಪಟ್ಟ ಜನಪ್ರತಿನಿಧಿಗಳಾಗಲಿ, ನಗರಸಭೆಯ ಅಧಿಕಾರಿಗಳಾಗಲಿ ಗಮನ ಹರಿಸದೆ ನಿರ್ಲಕ್ಷಿಸಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ನಗರದ ೧೧ನೇ ವಾರ್ಡಿಗೆ ಸೇರಿದ ಕಠಾರಿಪಾಳ್ಯದಲ್ಲಿನ ಪಂಚಣ್ಣ ಅಂಗಡಿ ಸಮೀಪದಲ್ಲಿನ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಅರಳೇ ಪೇಟೆಯಲ್ಲಿರುವ ಸುವರ್ಣ ಸೆಂಟ್ರಲ್ ಶಾಲೆಯ ಸಮೀಪ ಇರುವ ಶುದ್ದ ಕುಡಿಯುವ ನೀರಿನ ಘಟಕಗಳು ಬಾಗಿಲು ಹಾಕಿ ಹಲವು ತಿಂಗಳುಗಳೆ ಕಳೆದಿದ್ದರೂ ಸಹ ಇತ್ತ ಯಾರು ಗಮನ ಹರಿಸದೆ ಅಲಂಕಾರಕ್ಕೆ ಮಾತ್ರ ಸೀಮಿತ ವಾಗಿದೆ.
ಬೇಸಿಗೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹೆಚ್ಚಾಗಿ ಅವಶ್ಯಕತೆ ಇರುವ ಕುಡಿಯುವ ನೀರಿನ ಘಟಕಗಳು ಹಾಳಾಗಿದ್ದರೆ ಸರಿಪಡೆಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸ ಬೇಕೆಂಬ ಕನಿಷ್ಟ ಪ್ರಜ್ಞೆಯೂ ಇಲ್ಲದ ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧ ಪಟ್ಟ ನಗರಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.
ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಠಾರಿ ಪಾಳ್ಯದಲ್ಲಿ ನಿರ್ಮಿಸಿದ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸಮರ್ಪಕವಾಗಿ ನಿರ್ವಾಹಣೆ ಮಾಡದೆ ನಿರ್ಲಕ್ಷಿಸಲಾಗಿದೆ. ಇವುಗಳಿಗೆ ನಿರ್ವಾಹಣೆ ಮಾಡಲು ಸಹ ಸಂಬಂಧ ಪಟ್ಟ ನಗರಸಭೆಯಿಂದ ಟೆಂಡರ್ ಕರಾರಿನ ಪ್ರಕಾರ ಹಣವನ್ನು ಪಡೆದಿರುವಂತ ಟೆಂಡರ್‌ದಾರರನ್ನು ಪ್ರಶ್ನೆಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸದ ಜನಪ್ರತಿನಿಧಿಗಳ
ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಗರಸಭೆಯ ಪೌರಾಯುಕ್ತರು ಸಾರ್ವಜನಿಕರ ದೂರನ್ನು ಗಂಭೀರವಾಗಿ ಪರಿಗಣಿಸಿ ಶುದ್ದ ಕುಡಿಯುವ ನೀರಿನ ಘಟಕಗಳ ಬಾಗಿಲನ್ನು ತೆರೆದು ಸಮರ್ಪಕವಾಗಿ ನಿರ್ವಾಹಣೆ ಮಾಡಲು ಕ್ರಮ ಜರುಗಿಸ ಬೇಕೆಂದು ಮನವಿ ಮಾಡಿದ್ದಾರೆ.