ಕುಡಿದ ಅಮಲಿನಲ್ಲಿ ಸ್ನೇಹಿತರ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

ಬೆಂಗಳೂರು,ಜು.೧೯- ಕುಡಿದ ಅಮಲಿನಲ್ಲಿ ಕೂಲಿ ಹಣಕ್ಕಾಗಿ ಇಬ್ಬರು ಸ್ನೇಹಿತರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೊಮ್ಮೇಪಲ್ಲಿ ಗ್ರಾಮದಲ್ಲಿ ನಡೆದಿದೆ.
ಬೊಮ್ಮೇಪಲ್ಲಿ ಗ್ರಾಮದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ರಾಜು ಕೊಲೆಯಾದವರು, ಕೃತ್ಯ ನಡೆಸಿ ಪರಾರಿಯಾಗಿರುವ ನಾರಾಯಣಸ್ವಾಮಿ ಪತ್ತೆಗೆ ಶೋಧ ನಡೆಸಲಾಗಿದೆ.
ಸ್ನೇಹಿತರಾಗಿದ್ದ ಇವರಿಬ್ಬರೂ ನಡುವೆ ಕಳೆದ ಜು.೧೫ ಗಲಾಟೆ ನಡೆದಿದೆ. ಗಲಾಟೆ ವೇಳೆ ರಾಜುಗೆ ನಾರಾಯಣಸ್ವಾಮಿ ಚಾಕುವಿನಿಂದ ಇರಿದು ಇಟ್ಟಿಗೆಯಿಂದ ಹೊಡೆದಿದ್ದಾನೆ.
ಗಾಯಗೊಂಡಿದ್ದ ರಾಜುವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಅತ್ಯಾಧುನಿಕ ಆಸ್ಪತ್ರೆಗೆ ಕೆರೆದಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದರು.
ಆದರೆ ಹಣದ ಕೊರತೆಯಿಂದ ರಾಜು ಬೇರೆ ಆಸ್ಪತ್ರೆಗೆ ಹೋಗಿದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ರಾಜು ಮೃತಪಟ್ಟಿದ್ದಾನೆ.
ಈ ಸಂಬಂಧ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ನಂತರ ಎಸ್ಪಿ ಡಿ ಎಲ್ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಸಹ ನಡೆಸಿದ್ದು, ಪರಾರಿಯಾಗಿರುವ ಆರೋಪಿ ನಾರಾಯಣಸ್ವಾಮಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.