ಕುಡಿತಿನಿಯಲ್ಲಿ ಶಿವಕುಮಾರ್ ಸ್ವಾಮೀಜಿ ಪುಣ್ಯಸ್ಮರಣೆ,ದಾಸೋಹ ದಿನ ಆಚರಣೆ.


ಸಂಜೆವಾಣಿ ವಾರ್ತೆ
ಕುರುಗೋಡು,ಜ,21: ತಾಲೂಕು ಸಮೀಪದ ಕುಡಿತಿನಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ವೀರಶೈವ ಸಮುದಾಯದ ವತಿಯಿಂದ ಇಂದು ಹಮ್ಮಿಕೊಂಡಿದ್ದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ್ ಸ್ವಾಮೀಜಿ ಅವರ ಐದನೇ ಪುಣ್ಯಸ್ಮರಣೆ ದಿನದ ನಿಮಿತ್ತ ಶ್ರೀಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ದಾಸೋಹ ದಿನ ಆಚರಿಸಲಾಯಿತು.
ಹರಪನಹಳ್ಳಿ ಮಠದ ಶ್ರೀ ಜಡೇಶ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ತ್ರಿವಿಧ ದಾಸೋಹದ ಮೂಲಕ ಸಿದ್ದಗಂಗಾ ಕ್ಷೇತ್ರದ ಡಾ.ಶಿವಕುಮಾರ ಶ್ರೀಗಳು ದಾಸೋಹ ಪರಂಪರೆಗೆ ಹೊಸ ಅರ್ಥವನ್ನು ನೀಡಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು.
ಹಳ್ಳಿ ಹಳ್ಳಿಗಳಲ್ಲಿ ಸುತ್ತಾಡಿ ದವಸ-ಧಾನ್ಯ ಸಂಗ್ರಹಿಸಿ, ನಿತ್ಯವೂ ತಪ್ಪದೇ ದಾಸೋಹ ಮಾಡಿಕೊಂಡು ಬಂದ ಶಿವಕುಮಾರ ಸ್ವಾಮೀಜಿ ಸ್ಮರಣೆಯಲ್ಲಿ ದಾಸೋಹ ದಿನವೆಂದು ಆಚರಣೆ ಮಾಡುತ್ತಿರುವುದು ಸೂಕ್ತವಾಗಿದೆ ಎಂದು ಹೇಳಿದರು.
ಸಾವಿರಾರು ಮಕ್ಕಳ ಬದುಕನ್ನು ರೂಪಿಸುವುದರ ಜತೆಗೆ ಅವರನ್ನು ಸಂಸ್ಕಾರವಂತರನ್ನಾಗಿಸಿದ್ದ ಶ್ರೀಗಳು ಜಗದಲ್ಲಿ ಲಕ್ಷಾಂತರ ಭಕ್ತರ ಆರಾಧ್ಯ ದೈವ ಪುರಷರಾಗಿದ್ದಾರೆ. ಅವರ ಸ್ಫೂರ್ತಿದಾಯಕ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಈ ವೇಳೆ ನೆರೆದಿದ್ದ 1500 ರಿಂದ 2000 ಭಕ್ತರಿಗೆ ಉಗ್ಗಿ, ಅನ್ನ, ಸಾರು, ಬದನೆಕಾಯಿ ಮತ್ತು ಉಪ್ಪಿನಕಾಯಿ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ವೀರಶೈವ ಸಮುದಾಯದವರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.