ಕುಡಿತಕ್ಕೆ ಹಣ ಕೊಡದ ತಮ್ಮನಿಗೆ ಚಾಕುವಿನಿಂದ ಹೊಡೆದು ಹತ್ಯೆ ಮಾಡಿದ ಅಣ್ಣ

ಕಲಬುರಗಿ.ಮೇ.31:ಕುಡಿತಕ್ಕೆ ಹಣ ಕೊಡಲಿಲ್ಲ ಎಂದು ಕೋಪಗೊಂಡು ತನ್ನ ತಮ್ಮನಿಗೆ ಅಣ್ಣನೊಬ್ಬ ಚಾಕುವಿನಿಂದ ಹೊಡೆದು ಹತ್ಯೆ ಮಾಡಿದ ಘಟನೆ ತಾಲ್ಲೂಕಿನ ಪಾಳಾ ಗ್ರಾಮದ ಮನೆಯಂಗಳದಲ್ಲಿ ಕಳೆದ ಮಂಗಳವಾರ ಸಂಜೆ 6-30ರ ಸುಮಾರಿಗೆ ಸಂಭವಿಸಿದೆ.
ಮೃತನಿಗೆ ಕಲ್ಯಾಣಿ ದಶರಥ್ ಹಕ್ಕಿ (26) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಯನ್ನು ಕಲ್ಯಾಣಿ ಹಕ್ಕಿ ಅಣ್ಣ ಭೀಮಾಶಂಕರ್ ಎಂದು ಗುರುತಿಸಲಾಗಿದೆ. ಗ್ಯಾಂಗ್‍ಮನ್ ಕೆಲಸ ಮಾಡುವ ದಶರಥ್ ತಂದೆ ಯಂಕಪ್ಪ ಹಕ್ಕಿ ಅವರಿಗೆ ಪತ್ನಿ ಶಿವಲಿಂಗಮ್ಮ, ಪುತ್ರರಾದ ರಾಕೇಶ್ ಹಕ್ಕಿ, ಭೀಮಾಶಂಕರ್ ಹಕ್ಕಿ, ಕಲ್ಯಾಣಿ ಹಕ್ಕಿ ಮೂವರು ಇದ್ದು, ಹಿರಿಯ ಪುತ್ರ ರಾಕೇಶ್ ಹಕ್ಕಿ ಮದುವೆಯಾಗಿದ್ದು, ಆತ ಬೇರೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ.
ಎರಡನೇ ಪುತ್ರ ಭೀಮು ಅಲಿಯಾಸ್ ಭೀಮಾಶಂಕರ್ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ. ಕೊನೆಯ ಪುತ್ರ ಕಲ್ಯಾಣಿ ಹಕ್ಕಿ ಗ್ರಾಮದಲ್ಲಿಯೇ ಪಶು ಆಸ್ಪತ್ರೆಯಲ್ಲಿ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದ. ಭೀಮಾಶಂಕರನು ಕಲ್ಯಾಣಿಗೆ ಯಾವಾಗಲು ಕುಡಿಯಲು ಹಣ ಕೊಡಲು ಪೀಡಿಸುತ್ತಿದ್ದ. ಮಂಗಳವಾರ ಸಂಜೆ ಭೀಮಾಶಂಕರನು ಕಲ್ಯಾಣಿ ಮನೆಯಿಂದ ಹೊರಗೆ ಹೋಗುವಾಗ ಕುಡಿಯಲು ಹಣ ಕೊಡಲು ಕೇಳಿದ. ಹಣ ಇಲ್ಲ, ಕೊಡುವುದಿಲ್ಲ ಎಂದು ಹೇಳಿದಾಗ ಅವಾಚ್ಯವಾಗಿ ಬೈದು ಭೀಮಾಶಂಕರನು ಹರಿತವಾದ ಚಾಕು ತೆಗೆದುಕೊಂಡು ಕಲ್ಯಾಣಿಯ ಬೆನ್ನಿನ ಕೆಳಭಾಗದಲ್ಲಿ ಬಲವಾಗಿ ಹೊಡೆದ. ಗಂಭೀರವಾಗಿ ಗಾಯಗೊಂಡು ಆತ ಚೀರಾಟ ಆರಂಭಿಸಿದಾಗ ಸ್ಥಳದಲ್ಲಿದ್ದ ಶರಣಪ್ಪ ಹಕ್ಕಿ ಮತ್ತು ರಾಮಚಂದ್ರ ಹಕ್ಕಿ ಅವರು ಕೂಡಲೇ ಅಂಬರೀಷ್ ನಿಪ್ಪಾಣಿ ಅವರ ಟಂಟಂನಲ್ಲಿ ಕಲ್ಯಾಣಿಯನ್ನು ಹಾಕಿಕೊಂಡು ನಗರದ ಮಣ್ಣೂರ್ ಆಸ್ಪತ್ರೆಗೆ ಸೇರಿಸಿದರು. ಆದಾಗ್ಯೂ, ಆತ ಮೃತಪಟ್ಟಿದ್ದಾಗಿ ವೈದ್ಯರು ಹೇಳಿದರು. ಈ ಕುರಿತು ಮೃತನ ತಂದೆ ದೂರು ಸಲ್ಲಿಸಿದ್ದು, ವಿಶ್ವವಿದ್ಯಾಲಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.