ಕುಡಾ ನವೀಕೃತ ಸಭಾಂಗಣದ ಪೂಜೆ: ನಿವೇಶನ ಹಂಚಿಕೆಗೆ ಚಾಲನೆ

ಕಲಬುರಗಿ.ಏ.17: ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ನವೀಕೃತ ಸಭಾಂಗಣದ ಪೂಜಾ ಕಾರ್ಯಕ್ರಮ ಶನಿವಾರ ಜರುಗಿತು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್, ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್, ಆಯುಕ್ತ ಎಂ. ರಾಚಪ್ಪ ಮುಂತಾದವರು ಉಪಸ್ಥಿತರಿದ್ದರು.
ನಿವೇಶನಗಳ ಹಂಚಿಕೆಗೆ ಅರ್ಜಿಗಳ ವಿತರಣೆಗೆ ಚಾಲನೆ:
ಪ್ರಾಧಿಕಾರವು ಅಭಿವೃದ್ಧಿಪಡಿಸುತ್ತಿರುವ ಶಹಾಬಾದ್ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನಂದೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಹತ್ತಿರ ಇರುವ ಹಾಗೂ ಪ್ರಸ್ತಾವಿತ 2ನೇ ವರ್ತುಲ ರಸ್ತೆಯ ಸಮೀಪದಲ್ಲಿ ನೂತನ ಬಡಾವಣೆಯಾದ ಕುಸನೂರು ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆ ಬಡಾವಣೆಯಲ್ಲಿ ರಚಿಸಲಾದ ನಿವೇಶನಗಳನ್ನು ಹಂಚಿಕೆ ಮಾಡುವುದಕ್ಕಾಗಿ ನಿವೇಶನ ರಹಿತ ಸಾರ್ವಜನಿಕರಿಗೆ ಅರ್ಜಿಗಳನ್ನು ವಿತರಿಸುವ ಕಾರ್ಯಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಸಂಘ, ಸಂಸ್ಥೆಯವರಿಗೆ ಹಂಚಿಕೆಯಾದ ನಿವೇಶನಗಳ ಹಂಚಿಕೆ ಪತ್ರವನ್ನು ವಿತರಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವತಿಯಿಂದ ಮಂಜೂರು ಮಾಡಿದ ಮೊತ್ತದನ್ವಯ ನಗರದಲ್ಲಿ ಸುಂದರವಾದ ನೂತನ ಕಾಯಿಪಲ್ಯೆ ಮಾರುಕಟ್ಟೆಯನ್ನು ನಿರ್ಮಿಸಲು ಸಿದ್ಧಪಡಿಸಿದ ನೀಲನಕ್ಷೆಯನ್ನು ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ವೀಕ್ಷಿಸಿದರು.
ನಗರದ ಶ್ರೀ ಶರಣಬಸವೇಶ್ವರರ ಕೆರೆಯನ್ನು ಅಭಿವೃದ್ಧಿಗೊಳಿಸಲು ತೆಗೆದುಕೊಂಡ ಕ್ರಮದ ಕುರಿತು ಪ್ರಾಧಿಕಾರದ ಅಧ್ಯಕ್ಷರೊಂದಿಗೆ ಸಮಾಲೋಚನೆಯನ್ನೂ ಮಾಡಿದರು.