ಕುಟುಂಬ ರಾಜಕಾರಣ ದೇಶಕ್ಕೆ ಮಾರಕ

ನವದೆಹಲಿ,ನ.೨೬- ದೇಶದಲ್ಲಿ ಹೆಚ್ಚುತ್ತಿರುವ ಕುಟುಂಬ ರಾಜಕಾರಣದ ಬಗ್ಗೆ ಕಿಡಿಕಾರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನದ ಬಗ್ಗೆ ಹಾಗೂ ಕುಟುಂಬ ರಾಜಕೀಯದ ಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಂವಿಧಾನದ ದಿನದ ಪ್ರಯುಕ್ತ ಸಂಸತ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಭಾರತದ ಸಂವಿಧಾನದಲ್ಲಿ ಪ್ರಜಾಪ್ರಭುತ್ವಕ್ಕೆ ವಿಶೇಷ ಸ್ಥಾನಮಾನವಿದೆ. ರಾಜಕೀಯ ಪಕ್ಷಗಳಿಗೆ ವಿಶೇಷ ಮಹತ್ವವೂ ಇದೆ. ಆದರೆ, ಸಂವಿಧಾನದ ಕೆಲವು ಆದರ್ಶಗಳನ್ನು ರಾಜಕೀಯ ಪಕ್ಷಗಳು ಪಾಲನೆ ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು
ಕುಟುಂಬ ರಾಜಕೀಯ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ನಮ್ಮದು ಕುಟುಂಬವಾದದ ಪಕ್ಷವಲ್ಲ. ಕೆಲವು ಪಕ್ಷಗಳಲ್ಲಿ ಕುಟುಂಬದಿಂದ, ಕುಟುಂಬಕ್ಕಾಗಿ ರಾಜಕೀಯ ಪಕ್ಷದ ಎಲ್ಲ ನಿರ್ಧಾರಗಳನ್ನು ಒಂದೇ ಕುಟುಂಬ ನಿರ್ಧರಿಸುತ್ತದೆ. ಯಾವುದೇ ಕುಟುಂಬ ಪಕ್ಷವನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳಬಾರದು. ಸಂವಿಧಾನದ ಕುಟುಂಬ ರಾಜಕೀಯದ ಬಗ್ಗೆ ಚಿಂತನೆ ನಡೆಸುವ ಅಗತ್ಯವಿರುವುದನ್ನು ಒತ್ತಿ ಹೇಳಿದರು.
ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ಬಗ್ಗೆಯೂ ಮಾತನಾಡಿದ ನರೇಂದ್ರಮೋದಿ, ಭ್ರಷ್ಟಾಚಾರಕ್ಕೆ ನಮ್ಮ ಸಂವಿಧಾನದಲ್ಲಿ ಶಿಕ್ಷೆ ಇದೆ. ಆದರೆ, ಕೆಲವು ರಾಜಕಾರಣಿಗಳು ಭ್ರಷ್ಟಾಚಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾದಾಗ ಭ್ರಷ್ಟಾಚಾರ ಮಾಡುವುದನ್ನು ಬಿಟ್ಟು ರಾಜಕೀಯ ಪಕ್ಷಗಳು ಭ್ರಷ್ಟರ ಪರ ಮಾತನಾಡುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಂವಿಧಾನದ ದಿನವನ್ನು ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ರಾಜೇಂದ್ರ ಪ್ರಸಾದ್‌ರವರಿಗೆ ಸಮರ್ಪಿಸಬೇಕಾಗಿದೆ. ಅಂಬೇಡ್ಕರ್ ನಮಗೆ ಸಂವಿಧಾನದ ಉಡುಗೊರೆ ನೀಡಿದ್ದಾರೆ. ಈ ದಿನ ಸದನಕ್ಕೆ ನಮಸ್ಕರಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಹೋರಾಟಗಾರರು ಭಾರತದ ಭವಿಷ್ಯ ನಿರ್ಧರಿಸಿದ್ದಾರೆ. ಇಂದು ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅವರಿಗೆ ನಾವು ನಮಸ್ಕರಿಸಬೇಕು. ಗಾಂಧೀಜಿಯಿಂದ ನಮಗೆ ಸ್ವಾತಂತ್ರ್ಯ ಲಭಿಸಿತು ಎಂದರು.
ಸಂವಿಧಾನ ಚಿಕ್ಕ ಚಿಕ್ಕ ರಾಜ್ಯಗಳನ್ನು ಒಂದಾಗಿ ಮಾಡಿ ಭಾರತವನ್ನು ನಿರ್ಮಿಸಿತು. ನಮ್ಮನ್ನು ಸಂವಿಧಾನ ಎಲ್ಲಿಗೆ ಕರೆದೊಯ್ಯಲಿದೆ ಎಂದು ಚರ್ಚೆ ನಡೆಸಬೇಕಾದ ಅಗತ್ಯವಿದೆ. ನಮ್ಮ ಮುಂದಿನ ತಲೆಮಾರು ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಸಂವಿಧಾನ ದೇಶವನ್ನು ಹೇಗೆ ಒಂದುಗೂಡಿಸಿತು ಎಂಬುದನ್ನು ಅರಿಯಬೇಕು ಎಂದು ಪ್ರಧಾನಿ ಹೇಳಿದರು.
ಇಂದು ದುಖಃದ ದಿನವೂ ಆಗಿದೆ. ಏಕೆಂದರೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಭಯೋತ್ಪಾದಕರು ವಿಧ್ವಂಸಕ ಕೃತ್ಯ ನಡೆಸಿದ ದಿನವೂ ಆಗಿದೆ. ಈ ಸಂದರ್ಭದಲ್ಲಿ ಉಗ್ರರ ಪೈಶಾಚಿಕ ದಾಳಿಗೆ ಅಸು ನೀಗಿದ ಅಮಾಯಕರು ಹಾಗೂ ಹುತಾತ್ಮರಾದ ಯೋಧರ ಆತ್ಮಕ್ಕೆ ಮೋದಿ ಅವರು ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಿದರು.
ಲೋಕಸಭಾಧ್ಯಕ್ಷ ಓಂ ಬಿರ್ಲಾ ಮಾತನಾಡಿ, ಭಾರತದ ಸಂವಿಧಾನವು ನಮಗೆ ಭಗವದ್ಗೀತೆಯ ಆಧುನಿಕ ಆವೃತ್ತಿಯಂತಿದೆ. ಇದು ದೇಶಕ್ಕಾಗಿ ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದರು.
ಪ್ರತಿಯೊಬ್ಬರು ದೇಶಕ್ಕಾಗಿ ಕೆಲಸ ಮಾಡಲು ಬದ್ಧರಾದಾಗ ಮಾತ್ರ ’ಏಕ ಭಾರತ ಶ್ರೇಷ್ಠ ಭಾರತ’ವನ್ನು ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಪ್ರಧಾನಿ ಕಿಡಿ
ಪ್ರತಿ ಪಕ್ಷಗಳು ಸಂವಿಧಾನದ ದಿನದ ಆಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿರುವ ಪ್ರತಿಪಕ್ಷಗಳ ವರ್ತನೆಗೆ ಪ್ರಧಾನಮಂತ್ರಿ ನರೇಂದ್ರಮೋದಿ ಕಿಡಿಕಾರಿದ್ದಾರೆ. ಸಂವಿಧಾನ ದಿನಾಚರಣೆ ಕಾರ್ಯಕ್ರಮ ಸರ್ಕಾರ ಆಚರಣೆ ಮಾಡಿಲ್ಲ. ಇದು ಪಕ್ಷದ ಕಾರ್ಯಕ್ರಮವಲ್ಲ ಎಂದು ಸ್ಪಷ್ಟಪಡಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳು ಪಾಲ್ಗೊಂಡು ಗೌರವ ಸೂಚಿಸುವುದು ಎಲ್ಲರ ಕರ್ತವ್ಯವಾಗಬೇಕು. ಆದರೆ, ಈ ಕಾರ್ಯಕ್ರಮ ಬಹಿಷ್ಕರಿಸಿ ಪ್ರತಿಪಕ್ಷಗಳು ಸಂವಿಧಾನಕ್ಕೆ ಅಗೌರವ ಸೂಚಿಸಿದೆ ಎಂದು ಟೀಕಿಸಿದರು.