ಕುಟುಂಬ ಯೋಜನೆ ಅಳವಡಿಸಿಕೊಳ್ಳಲು ಆಪ್ತ ಸಮಾಲೋಚನೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೭; ಚಿತ್ರದುರ್ಗ ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ಗುರುವಾರ ದಂಪತಿ ಸಂಪರ್ಕ ಪಾಕ್ಷಿಕ ಜನಸಂಖ್ಯೆ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಅರ್ಹ ದಂಪತಿಗಳ ಮನವೊಲಿಸಲು ಬಹು ಮಕ್ಕಳ ತಾಯಂದಿರ ಮನೆ ಭೇಟಿ ನಡೆಸಿ, ಕುಟುಂಬ ಯೋಜನೆ ಅಳವಡಿಸಿಕೊಳ್ಳಲು ಆಪ್ತ ಸಮಾಲೋಚನೆ ನಡೆಸಲಾಯಿತು.ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿಗ ಎನ್.ಎಸ್.ಮಂಜುನಾಥ್ ಭಾಗವಹಿಸಿ ಮಾತನಾಡಿ, ಚಿಕ್ಕ ಕುಟುಂಬದ ಆದರ್ಶ ಪಾಲಿಸಬೇಕು. ಮೇಲಿಂದ ಮೇಲೆ ಮಕ್ಕಳನ್ನು ಹೇರುವುದರಿಂದ ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಕುಟುಂಬದ  ಆರ್ಥಿಕತೆ, ಕ್ಷೀಣಿಸುತ್ತದೆ. ಒಂದು ಮಗುವಿಗೂ ಇನ್ನೊಂದು ಮಗುವಿಗೂ ಕನಿಷ್ಠ ಅಂತರ ಮೂರು ವರ್ಷವಾದರೂ ಇರಬೇಕು. ಇಲ್ಲದಿದ್ದಲ್ಲಿ ತಾಯಿಯ ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಉಂಟು. ರಕ್ತ ಹೀನತೆಯಿಂದ ಬಳಲುತ್ತಿರುತ್ತಾರೆ. ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದರು ಕೂಡಲೆ ಸುಸ್ತಾಗುತ್ತಾರೆ. ದಿನನಿತ್ಯ ಕೂಲಿ ಮಾಡಿ ಜೀವನ ಸಾಗಿಸುವವರಿಗೆ ತೊಂದರೆ ಆಗುತ್ತದೆ. ಅಲ್ಲದೆ ಮಕ್ಕಳ ಆರೈಕೆಯಲ್ಲೂ ಕೂಡ ಹಿಂದೆ ಬೀಳುತ್ತಾರೆ. ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ತುಂಬಾ ಕಷ್ಟ ಪಡಬೇಕಾಗುತ್ತದೆ. ತಾಯಿ ಮರಣ ಮಕ್ಕಳ ಮರಣ ಸಂಖ್ಯೆ ಹೆಚ್ಚಾಗುತ್ತದೆ ಎಂದರು.