ಕುಟುಂಬ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ ಆದರ್ಶ ಜನಸಂಖ್ಯೆ

ಕಲಬುರಗಿ:ಜು.11: ಯಾವುದೇ ರಾಷ್ಟ್ರದ ಅಭಿವೃದ್ಧಿಯನ್ನು ನಿರ್ಧರಿಸುವಲ್ಲಿ ಅಲ್ಲಿನ ಜನಸಂಖ್ಯೆಯ ಪ್ರಮಾಣವು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಜನಸಂಖ್ಯೆ ಮಿತಿಮೀರಿದಾಗ ರಾಷ್ಟದ ಅಭಿವೃದ್ಧಿಗೆ ತೊಡಕಾಗುವದರಿಂದ ಅದನ್ನು ನಿಯಂತ್ರಿಸಿ, ಆದರ್ಶ ಜನಸಂಖ್ಯೆಯನ್ನಾಗಿಯನ್ನಾಗಿಸುವಲ್ಲಿ ಇಬ್ಬರು ಮಕ್ಕಳು, ಅವರಿಬ್ಬರ ನಡುವೆ ಅಂತರದಂತಹ ಕ್ರಮಗಳನ್ನು ಹೊಂದಿರುವ ಕುಟುಂಬ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.

    ನಗರದ ಶಹಾಬಜಾರ ಶೇಖರೋಜಾದಲ್ಲಿರುವ 'ನಗರ ಪ್ರಾಥಮಿಕ ಆರೋಗ್ಯ ಕೇಂದ್ರ'ದಲ್ಲಿ ಜಿಲ್ಲಾಡಳಿತ, ಜಿ.ಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, 'ಬಸವೇಶ್ವರ ಸಮಾಜ ಸೇವಾ ಬಳಗ'ದ ಇವುಗಳ ಸಹಯೋಗದೊಂದಿಗೆ ಏರ್ಪಡಿಲಾಗಿದ್ದ 'ವಿಶ್ವ ಜನಸಂಖ್ಯಾ ದಿನಾಚರಣೆ'ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಎಲ್ಲಿ ಜೀವನ ಹಾಗೂ ಶಿಕ್ಷಣ ಮಟ್ಟಗಳು ಹೆಚ್ಚಾಗಿರುತ್ತವೆಯೋ, ಅಲ್ಲಿ ಜನಸಂಖ್ಯೆ ಕಡಿಮೆಯಿರುವುದರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜನಸಂಖ್ಯಾ ಸ್ಪೋಟದಿಂದಾಗಿ ಜಗತ್ತಿನಲ್ಲಿ ಲಭ್ಯವಿರುವ ಸೀಮಿತ ಸಂಪನ್ಮೂಲಗಳ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತಿದೆ. ಜನಸಂಖ್ಯೆಯ ಧನಾತ್ಮಕ ಮತ್ತು ಋಣಾತ್ಮಕ ಸಂಗತಿಗಳ ಬಗ್ಗೆ ವಿದ್ಯಾರ್ಥಿ ದೆಸೆಯಿಂದಲೇ ತಿಳಿದುಕೊಂಡು ಅದರ ಬಗ್ಗೆ ಕಾಳಜಿ ವಹಿಸಿ, ಜಾಗೃತಿಯನ್ನುಂಟು ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ. ಜನಸಂಖ್ಯಾ ಸ್ಫೋಟದಿಂದಾಗಿ ಅನೇಕ ಸಮಸ್ಯೆಗಳು ಉಂಟಾಗುತ್ತಿದ್ದು, ಅದರ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ, ಜನಸಂಖ್ಯೆ ನಿಯಂತ್ರಣ, ಗರ್ಭೀಣಿ ತಾಯಿಂದಿರ ಮತತು ಮಕ್ಕಳ ಆರೋಗ್ಯ ಕಾಪಾಡುವುದು, ಸುರಕ್ಷಿತ ಹೆರಿಗೆ, ಮಕ್ಕಳ ನಡುವೆ ಸುರಕ್ಷಿತ ಅಂತರ ಕಾಪಾಡುವುದು, ಲಿಂಗಾನುಪಾತದ ಅಸಮತೋಲನೆ ತಪ್ಪಿಸಲು ಸರ್ಕಾರ, ಆರೋಗ್ಯ ಇಲಾಖೆ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಪಾಲಿಸುವ ಮೂಲಕ ಆದರ್ಶ ಜನಸಂಖ್ಯೆಯನ್ನಾಗಿಸಿ, ಸದೃಢ ಮಾನವ ಸಂಪನ್ಮೂಲವನ್ನಾಗಿಸಲು ಸಹಕರಿಸಲು ಮನವಿ ಮಾಡಿದರು.

   ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಡಿ.ವಿ.ಕುಲಕರ್ಣಿ, ಶ್ರೀನಿವಾಸ ಬುಜ್ಜಿ, ನಾಗೇಶ್ವರಿ ಮುಗಳಿವಾಡಿ, ಮಂಗಳಾ ಚಂದಾಪುರೆ, ಲಕ್ಷ್ಮೀ, ನಾಗಮ್ಮ, ರೇಷ್ಮಾ ನಕ್ಕುಂದಿ, ಶ್ರೀದೇವಿ, ಸಚಿನ್ ಸೇರಿದಂತೆ ಬಡಾವಣೆಯ ಹಾಗೂ ಸುತ್ತಲಿನ ನಾಗರಿಕರು, ಮಹಿಳೆಯರು ಸೇರಿದಂತೆ ಮತ್ತಿರರು ಪಾಲ್ಗೊಂಡಿದ್ದರು.