ಕುಟುಂಬದ ವಿರುದ್ಧ ಷಡ್ಯಂತ್ರ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಮೇ ೧೮- ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ತಕರಾರಿಲ್ಲ. ಆದರೆ ಮಾಜಿ ಸಚಿವ ರೇವಣ್ಣನವರ ವಿರುದ್ಧ ಪ್ರಕರಣವನ್ನು ಸೃಷ್ಟಿಸಲಾಗಿದೆ. ನಮ್ಮ ಕುಟುಂಬಕ್ಕೆ ರಾಜಕೀಯವಾಗಿ ಹಿನ್ನಡೆ ಮಾಡುವ ಷಡ್ಯಂತ್ರಗಳು ನಡೆದಿವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಸಂಸದ ಪ್ರಜ್ವಲ್ ರೇವಣ್ಣನವರ ಪ್ರಕರಣದ ಬಗ್ಗೆ ಮೌನ ಮುರಿದು ಮಾತನಾಡಿರುವ ಮಾಜಿ ಪ್ರಧಾನಿ ದೇವೇಗೌಡ ಅವರು, ಪ್ರಜ್ವಲ್ ಮತ್ತು ಹೆಚ್.ಡಿ. ರೇವಣ್ಣನವರ ಬಗ್ಗೆ ಏನೆಲ್ಲಾ ಘಟನೆಗಳು ನಡೆದಿವೆ. ಎಲ್ಲವನ್ನೂ ಗಮನಿಸಿದ್ದೇನೆ. ಪ್ರಜ್ವಲ್ ರೇವಣ್ಣ ಹೊರಗಡೆ ಹೋಗಿದ್ದಾರೆ. ಈ ಘಟನೆಯ ಬಗ್ಗೆ ಕುಮಾರಸ್ವಾಮಿಯವರು ನಮ್ಮ ಕುಟುಂಬದ ಪರವಾಗಿ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ ಎಂದರು.
ಪ್ರಜ್ವಲ್ ರೇವಣ್ಣನವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ತಕರಾರಿಲ್ಲ. ಈ ಪ್ರಕರಣದಲ್ಲಿ ಯಾರು ಯಾರು ಇದ್ದಾರೋ ಅವರೆಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ನಾನು ಯಾರ ಹೆಸರನ್ನು ಹೇಳಲು ಹೋಗುವುದಿಲ್ಲ. ಆದರೆ ಎಲ್ಲರ ಮೇಲೂ ಕ್ರಮ ಕೈಗೊಳ್ಳಬೇಕು ಎಂದರು.
ತಮ್ಮ ೯೨ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಜೆ.ಪಿ. ನಗರದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಆ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಸಂಸದ ಪ್ರಜ್ವಲ್ ರೇವಣ್ಣನವರ ವಿರುದ್ಧ ಕ್ರಮ ಕೈಗೊಳ್ಳುವುದರ ಬಗ್ಗೆ ಯಾವ ತಕರಾರು ಇಲ್ಲ. ಆದರೆ ರೇವಣ್ಣನವರ ಬಗ್ಗೆ ಪ್ರಕರಣ ಸೃಷ್ಟಿ ಮಾಡಿರುವುದು ರಾಜ್ಯದ ಜನತೆಗೆ ಗೊತ್ತಿದೆ. ಯಾವ ರೀತಿ ಪ್ರಕರಣ ದಾಖಲು ಮಾಡಿದ್ದಾರೆ, ಈಗ ನ್ಯಾಯಾಲಯ ರೇವಣ್ಣನವರಿಗೆ ಜಾಮೀನು ಕೊಟ್ಟಿದೆ. ನಾಡಿದ್ದು ಮತ್ತೊಂದು ಜಾಮೀನಿನ ತೀರ್ಪು ಬಾಕಿ ಇದೆ. ಯಾವ ರೀತಿ ಏನೇನು ನಡೆಯುತ್ತಿದೆ ಎನ್ನುವುದನ್ನು ನಾನು ವಿಶ್ಲೇಷಣೆ ಮಾಡಲ್ಲ. ಕುಮಾರಸ್ವಾಮಿಯವರು ಘಟನೆ ಬಗ್ಗೆ ಯಾರನ್ನು ರಕ್ಷಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ ಎಂದರು.
ಈ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಯಾವ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ, ಯಾವ ಹೆಣ್ಣು ಮಕ್ಕಳು ಅಪಾಯಕ್ಕೆ ಸಿಲುಕಿದ್ದಾರೆ, ಅವರಿಗೆಲ್ಲಾ ನ್ಯಾಯ ಸಿಗಬೇಕು, ಅವರಿಗೆ ಪರಿಹಾರ ನೀಡಬೇಕು ಎಂಬ ವಿಚಾರವನ್ನು ಕುಮಾರಸ್ವಾಮಿಯವರು ಬಿಡಿಸಿ ಬಿಡಿಸಿ ಹೇಳಿದ್ದಾರೆ. ನಾನೇನು ಈ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ ಎಂದರು.
ಕಳೆದ ಹಲವು ದಿನಗಳಿಂದ ಮಾಧ್ಯಮದವರಾದ ನೀವುಗಳು ನನ್ನ ಪ್ರತಿಕ್ರಿಯೆಗಾಗಿ ಕಾದು ಕುಳಿತಿದ್ದೀರಿ, ನಾನು ಈಗ ಹೆಚ್ಚು ಮಾತನಾಡಲ್ಲ. ಜೂ. ೪ರ ಲೋಕಸಭಾ ಚುನಾವಣೆಯ ಫಲಿತಾಂಶ ಬರಲಿ, ನಂತರ ನಿಮ್ಮನ್ನೆಲ್ಲ ಕರೆದು ಮಾತನಾಡುತ್ತೇನೆ. ಈಗ ಇದನ್ನು ಸಮಾಪ್ತಿ ಮಾಡೋಣ. ನೀವು ಏನು ಸುದ್ದಿ ಮಾಡಿಕೊಳ್ಳಬೇಕೋ ಅದಕ್ಕೆ ಸ್ವತಂತ್ರರಿದ್ದೀರಿ, ನಾನು ಏನು ಹೇಳಬೇಕು ಅನ್ನುವುದು ಜೂ. ೪ರ ನಂತರ ಹೇಳುತ್ತೇನೆ ಎಂದರು.
ಈ ಪ್ರಕರಣಗಳಿಂದ ನಿಮ್ಮ ಕುಟುಂಬಕ್ಕೆ ರಾಜಕೀಯ ಹಿನ್ನೆಡೆ ಮಾಡುವ ಷಡ್ಯಂತ್ರ ಇದೆಯೇ ಎಂಬ ಪ್ರಶ್ನೆಗೆ ನಿಜ, ಯಾರು ಏನೆಲ್ಲಾ ಮಾಡುತ್ತಿದ್ದಾರೋ ಮಾಡಲಿ, ಕುಮಾರಸ್ವಾಮಿಯವರು ರಾಜಕೀಯವಾಗಿ ಸಕ್ರಿಯವಾಗಿದ್ದಾರೆ. ಅವರಿಗೆ ಎಲ್ಲವನ್ನು ಎದುರಿಸುವ ಶಕ್ತಿ ಇದೆ. ಹಾಗಾಗಿ ಎಲ್ಲವನ್ನು ರಾಜಕೀಯವಾಗಿ ಎದುರಿಸುತ್ತಾರೆ. ನಾನು ಸಹ ಲೋಕಸಭಾ ಚುನಾವಣೆಯಲ್ಲಿ ಎಲ್ಲೆಡೆ ಪ್ರಚಾರ ಮಾಡಿದ್ದೇನೆ. ಫಲಿತಾಂಶ ಬರಲಿ, ನಂತರ ಮಾತನಾಡುತ್ತೇನೆ ಎಂದರು.
ಪೆನ್‌ಡ್ರೈವ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೆಸರೇಳಲು ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ೧೦೦ ಕೋಟಿ ರೂ. ಆಮಿಷವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ದೇವೇಗೌಡ ಅವರು, ನಾನು ಸಹ ದೇವರಾಜೇಗೌಡರವರ ಮಾತುಗಳನ್ನು ಮಾಧ್ಯಮಗಳಲ್ಲಿ ಕೇಳಿದ್ದೇನೆ, ನೋಡಿದ್ದೇನೆ. ನಾನು ಈ ಬಗ್ಗೆ ಪ್ರತಿಕ್ರಿಯಿಸಲ್ಲ, ಕುಮಾರಸ್ವಾಮಿಯವರೇ ಈ ಬಗ್ಗೆ ಮಾತನಾಡಿದ್ದಾರೆ. ಅವರೇ ಎಲ್ಲವನ್ನು ಸಮರ್ಥವಾಗಿ ಎದುರಿಸಲಿದ್ದಾರೆ ಎಂದರು.
ಈ ಪ್ರಕರಣಗಳಲ್ಲಿ ಕಾನೂನು ವ್ಯಾಪ್ತಿಯಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಆ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ದೇವೇಗೌಡರು ಹೇಳಿದರು.
ಇಂದು ನನ್ನ ೯೨ನೇ ಹುಟ್ಟುಹಬ್ಬ. ಪ್ರತಿ ವರ್ಷವೂ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇನೆ. ಅದರಂತೆ ಇಂದು ಸಹ ಪೂಜೆ ಮಾಡಿಸಿ ಬಂದಿದ್ದೇನೆ. ನನ್ನ ಅಭಿಮಾನಿಗಳಿಗೆ ಈಗಾಗಲೇ ಹುಟ್ಟುಹಬ್ಬದ ಆಚರಣೆ ಬೇಡ ಎಂದು ವಿನಂತಿಸಿಕೊಂಡಿದ್ದೇನೆ. ಕೆಲವರು ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ದಾರೆ. ಎಲ್ಲರಿಗೂ ಶುಭ ಹಾರೈಸುತ್ತೇನೆ ಎಂದರು.
ವಿಶೇಷ ಪೂಜೆ
ಮಾಜಿ ಪ್ರಧಾನಿ ದೇವೇಗೌಡರು ತಮ್ಮ ೯೨ನೇ ಹುಟ್ಟುಹಬ್ಬದ ದಿನವಾದ ಇಂದು ಜೆ.ಪಿ.ನಗರದಲ್ಲಿರುವ ಲಕ್ಷ್ಮೀವೆಂಕಟೇಶ್ವರ ದೇವಾಲಯಕ್ಕೆ ತಮ್ಮ ಹಿರಿಯ ಪುತ್ರ ಬಾಲಕೃಷ್ಣೇಗೌಡರವರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಪ್ರಧಾನಿ ಶುಭಾಶಯ
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಇಂದು ೯೨ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿ, ಕೃಷಿ ಕ್ಷೇತ್ರದ ಪ್ರಗತಿಯಲ್ಲಿ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ರಾಷ್ಟ್ರಕ್ಕೆ ನೀಡಿದ ಕೊಡುಗೆಗಾಗಿ, ರಾಜಕೀಯ ವಲಯದಲ್ಲಿ ಅವರು ಸಾಕಷ್ಟು ಗೌರವಕ್ಕೆ ಪಾತ್ರರಾಗಿದ್ದಾರೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಅವರ ಒಲವು ಗಮನಾರ್ಹವಾಗಿದೆ. ಅವರಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿಯವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.