
ಕಲಬುರಗಿ,ಮಾ.11-ಕೌಟುಂಬಿಕ ಜೀವನದಲ್ಲಿ ಗಂಡ ಮಗುವಿನಷ್ಟೇ ಹೆಣ್ಣು ಮಕ್ಕಳಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲ್ ಹೇಳಿದರು.
ಇಲ್ಲಿನ ಕುಸನೂರ ರಸ್ತೆಯ ರೇಷ್ಮೆ ವಿದ್ಯಾ ಭವನ ಸಭಾಂಗಣದಲ್ಲಿ ಶುಕ್ರವಾರ ರೇಷ್ಮಿ ಏಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್‍ನ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಬಿ.ಇಡಿ ಮತ್ತು ಎಂ.ಇಡಿ ಕಾಲೇಜಿನ ಆಶ್ರಯದಲ್ಲಿಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಹಾಗೂ ಪ್ರಶಸ್ತಿ ಸಮಾರಂಭದಲ್ಲಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ದೇಶದ ಸರಾಸರಿ ಲಿಂಗಾನುಪಾತ 988 ಸ್ತ್ರೀಯರಿದ್ದು, ಹೆಣ್ಣು ಮಗು ಎಂದಾಕ್ಷಣ ಕೀಳು ಮನೋಭಾವ ಬೇಡ, ಒಡ ಹುಟ್ಟಿದ ಮಕ್ಕಳಲ್ಲೇ ತಾರತಮ್ಯ ಮಾಡುವುದು ಸರಿಯಲ್ಲ, ಸದ್ಯ ಜಾಗತಿಕ ಮಟ್ಟದಲ್ಲಿ ಸ್ತ್ರೀ ಶೋಷಣೆ, ದೌರ್ಜನ್ಯ, ಕೌರ್ಯತೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಆಶೀರ್ವಚನ ನೀಡಿದ ಪೂಜ್ಯ ಪ್ರಭು ಶ್ರೀ ತಾಯಿ, ಹೆಣ್ಣು ತ್ಯಾಗಮಯಿ, ಕರುಣಾಶೀಲ, ಯಶಸ್ವಿ ಪುರುಷನ ಹಿಂದೆ ಮಹಿಳೆ ಪಾತ್ರ ಹಿರಿದಾಗಿದೆ. 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ
ಮಹಿಳೆಯರಿಗೂ ಸಮಾನ ಅವಕಾಶಗಳು ಕಲ್ಪಿಸಲಾಗಿತ್ತು. ಹೀಗಾಗಿ, ಎಲ್ಲ ಮಕ್ಕಳನ್ನು ದೃಷ್ಟಿಕೋನದಿಂದ ಕಂಡಾಗ ಮಾತ್ರ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪ್ರಾದೇಶಿಕ ಕೇಂದ್ರದ ಸಹಾಯಕಿ ಪ್ರಾಧ್ಯಾಪಕಿ ಡಾ.ಸ್ವರೂಪಾ ಶಾಸ್ತ್ರಿ ಉಪನ್ಯಾಸ ನೀಡಿದರು.
ವೇದಿಕೆ ಮೇಲೆ ರೇಷ್ಮಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ಡಾ.ಭಾರತಿ ಎನ್. ರೇಷ್ಮೆ, ರೇಷ್ಮೆ ವಿದ್ಯಾ ಸಂಸ್ಥೆಯ ಖಜಾಂಚಿ ಹಾಗೂ ಐಕ್ಯುಯುಸಿ ಸಂಯೋಜಕಿ ಡಾ.ಗೀತಾ, ಆರ್.ಎಂ. ಕಾಲೇಜಿನ ಪ್ರಾಚಾರ್ಯ ಡಾ.ರಾಜಶೇಖರ ಶಿರವಾಳಕರ್ ಉಪಸ್ಥಿತರಿದ್ದರು.
ಉಪನ್ಯಾಸಕಿ ವೀಣಾ ಮೋದಿ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಶರದ್ ಎನ್. ರೇಷ್ಮಿ, ಶರಣಗೌಡ, ಸುರೇಖಾ ಪಾಟೀಲ್, ಅನುರಾಧಾ ಕುಲಕರ್ಣಿ, ಶ್ರೀಶೈಲ ಮಠಪತಿ, ಸುನೀತಾ ಮತ್ತಿತರಿದ್ದರು. ಜಯಲಕ್ಷ್ಮೀ ಪಾಟೀಲ ಅತಿಥಿಗಳ ಪರಿಚಯಿಸಿದರು. ವಿದ್ಯಾರ್ಥಿಗಳಾದ ಸ್ನೇಹಾ ಅಶೋಕ, ಶ್ರೀಧರ ಅನಿಸಿಕೆ ವ್ಯಕ್ತಪಡಿಸಿದರು.
ಪ್ರಶಸ್ತಿ ಪುರಸ್ಕøತರು
ಅಕ್ಕಮಹಾದೇವಿ ಆಶ್ರಮದ ಪೂಜ್ಯ ಪ್ರಭು ಶ್ರೀ ತಾಯಿ (ಅಧ್ಯಾತ್ಮಿಕ ಸಾಧನ ರತ್ನ ಪ್ರಶಸ್ತಿ), ಕಪಿಲಾ ಮಡಿವಾಳ (ಬಾಣಂತಿ ಮಗು ಸೇವಾ ರತ್ನ ಪ್ರಶಸ್ತಿ), ಅಂಜಲಿ ಶರಣಪ್ಪ (ಸ್ತ್ರೀ ಶಕ್ತಿ ರತ್ನ ಪ್ರಶಸ್ತಿ), ಮಮತಾ ಬಾಬುರಾವ ಯಡ್ರಾಮಿ (ಕಾಯಕ ರತ್ನ ಪ್ರಶಸ್ತಿ) ನೀಡಿ ಗೌರವಿಸಲಾಯಿತು.