
ಬೀದರ್:ಮಾ.14: ಮೊದಲು ಕುಟುಂಬದಲ್ಲಿಯೇ ಲಿಂಗ ತಾರತಮ್ಯ ನಿಲ್ಲಬೇಕು ಎಂದು ಫಾದರ್ ಅನಿಲ ಕ್ರಾಸ್ತಾ ಹೇಳಿದರು.
ಆರ್ಬಿಟ್ ಹಾಗೂ ಕಾರ್ಮೆಲ್ ಸೇವಾ ಟ್ರಸ್ಟ್ ವತಿಯಿಂದ ಶಹಾಪುರ ಗೇಟ್ ಸಮೀಪ ಸೇಂಟ್ ಜೋಸೆಫ್ ಚರ್ಚ್ ಆವರಣದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಲಕರು ಗಂಡು ಮಗುವಿಗೆ ತೋರುವಷ್ಟು ಕಾಳಜಿ ಹೆಣ್ಣು ಮಗುವಿಗೆ ನೀಡುವುದಿಲ್ಲ. ಮೊದಲು ಕುಟುಂಬದಿಂದ ತಾರತಮ್ಯ ನಿವಾರಣೆಯಾದರೆ ಸಮಾಜದಲ್ಲೂ ಲಿಂಗ ತಾರತಮ್ಯ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಶಾಶಕ ರಹೀಂ ಖಾನ್ ಮಾತನಾಡಿ, ಮಹಿಳೆಯರು ತಮಗೆ ಆದ ಅನ್ಯಾಯವನ್ನು ಸಹಿಸಿಕೊಂಡು ಸುಮ್ಮನೆ ಕುಳಿತಕೊಳ್ಳಬಾರದು ಎಂದರು.
ಅಂಚೆ ಇಲಾಖೆಯ ಮಂಗಲಾ ಭಗವತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳ ತರ ಕುಟುಂಬದಲ್ಲಿ ಸಮಾಜದಲ್ಲಿ ಸಮಾನ ಗೌರವ ಸ್ಥಾನಮಾನ ಸಿಗಬೇಕಾದರೆ ಹೆಣ್ಣು ಮಕ್ಕಳೂ ಕೂಡ ಎಲ್ಲಾ ಕ್ಷೇತ್ರಗಳಲ್ಲಿ ದುಡಿಯಬೇಕು ಹಾಗೂ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದರು.
ಸಿಸ್ಟರ್ ನ್ಯಾನ್ಸಿ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಸ್ವ ಸಹಾಯ ಸಂಘಗಳಲ್ಲಿ ಉತ್ತಮ ಸಾಧನೆ ಮಾಡಿದ 10 ಮಹಿಳೆಯರನ್ನು ಸನ್ಮಾನಿಸಲಾಯಿತು.
ಆರ್ಬಿಟ್ ಸಂಸ್ಥೆಯ ನಿರ್ದೇಶಕ ಫಾದರ್ ವಿಕ್ಟರ್ ವಾಸ್ ಮತ್ತು ಕಾರ್ಮೆಲ್ ಸೇವಾ ಟ್ರಸ್ಟ್ ನಿರ್ದೇಶಕಿ ಸಿಸ್ಟರ್ ಕ್ರಿಸ್ಟಿನ್ ಮಿಸ್ಕಿತ್ ಕಾರ್ಯಕ್ರಮ ಆಯೋಜಿಸಿದ್ದರು.