ಕುಖ್ಯಾತ ಹಳೆಕಳ್ಳನ ಸೆರೆ ೧೩ ಲಕ್ಷ ಮೌಲ್ಯದ ಚಿನ್ನ ವಶ

ಬೆಂಗಳೂರು, ಮಾ.೨೫-ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನ ಕಳವು ಮಾಡುತ್ತಿದ್ದ ಕುಖ್ಯಾತ ಹಳೆಕಳ್ಳನನ್ನು ಬಂಧಿಸಿರುವ ತಿಲಕನಗರ ಪೊಲೀಸರು ೧೩ ಲಕ್ಷ ಬೆಲೆಬಾಳುವ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ತಿಪಟೂರಿನ ಗಾಂಧಿನಗರದ ಸೈಯ್ಯದ್ ರಿಯಾಜ್ (೪೬) ಬಂಧಿತ ಆರೋಪಿಯಾಗಿದ್ದಾನೆ.ಬಂಧಿತನಿಂದ ೧೩ ಲಕ್ಷ ಬೆಲೆಬಾಳುವ ೨೭೧ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದರು.
ಕಳವು ಪ್ರಕರಣವೊಂದರಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದು ಮತ್ತೆ ಕಳ್ಳತನಕ್ಕೆ ಆರೋಪಿ ಇಳಿದಿದ್ದ ಎಂದರು.
ಕಳೆದ ಮಾರ್ಚ್ ೧೫ ರಂದು ಬಿಹೆಚ್ ಇಎಲ್ ಲೇಔಟ್ ನಲ್ಲಿ ಕಳ್ಳತನ ಮಾಡಿದ್ದ ಆರೋಪಿಯು ತಲೆಮರೆಸಿಕೊಂಡಿದ್ದ ಇದರ ಜೊತೆಗೆ ತಿಲಕ್ ನಗರದಲ್ಲಿ ಮೊಹಮ್ಮದ್ ರಫೀಕ್ ಎಂಬುವವರ ಮನೆಯಲ್ಲಿ ಕಳವು ಮಾಡಿ ಪರಾರಿಯಾಗಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ತಿಲಕ್ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಗಿರೀಶ್ ಮತ್ತವರ ಸಿಬ್ಬಂದಿ ಖಚಿತ ಮಾಹಿತಿ ಆಧರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಯು ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದು ನಗರದ ವಿವಿಧ ಕಡೆಗಳಲ್ಲಿ ಸುತ್ತಾಡಿ ನಿರ್ಜನ ಪ್ರದೇಶದ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಎಂದು ಅವರು ತಿಳಿಸಿದರು.
ಆರೋಪಿಯ ಬಂಧನದಿಂದ ತಿಲಕ್ ನಗರ ಮೈಕೋ ಲೇಔಟ್ ಸುದ್ದಗುಂಟೆಪಾಳ್ಯ ಸೇರಿದಂತೆ ವಿವಿಧೆಡೆ ನಡೆದಿದ್ದ ನಾಲ್ಕು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದರು.