ಕುಖ್ಯಾತ ಸೈಕಲ್ ಕಳ್ಳನ ಬಂಧನ 9 ಲಕ್ಷ ಮೌಲ್ಯದ ಮಾಲು ವಶ

ಬೆಂಗಳೂರು,ಸೆ.೫-ದುಬಾರಿ ಸೈಕಲ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಮಹದೇವಪುರ ಪೊಲೀಸರು ಬಂಧಿಸಿ ೬೦ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಮೂಲದ ಕಾಡಬೀಸನಹಳ್ಳಿಯ ನವೀನ್ (೩೮) ಬಂಧಿತ ಆರೋಪಿಯಾಗಿದ್ದಾನೆ.ಬಂಧಿತನಿಂದ ವಿವಿಧ ಕಂಪನಿಯ ೯ ಲಕ್ಷ ಮೌಲ್ಯದ ೬೦ ಸೈಕಲ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಆರೋಪಿ ನಗರದ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ಗಳ ಮುಂದೆ ನಿಲ್ಲಿಸಿದ್ದ ದುಬಾರಿ ಸೈಕಲ್‌ಗಳನ್ನೇ ಕಳ್ಳತನ ಮಾಡಿ, ಸೆಕ್ಯುರಿಟಿ ಗಾರ್ಡ್‌ಗಳಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಸಾಲು ಸಾಲು ದೂರು ದಾಖಲಾಗಿದ್ದು,ಮಹದೇವಪುರದಲ್ಲಿ ನಡೆದಿದ್ದ ಸೈಕಲ್ ಕಳವು ಮಾಡಿದ ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ ೯ ಲಕ್ಷ ಮೌಲ್ಯದ ೬೦ ಸೈಕಲ್‌ಗಳನ್ನು ಪೊಲೀಸರು ವಶಕ್ಕೆ ಪಡೆಯಲಾಗಿದ್ದು ಸೈಕಲ್ ಕಳವು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುವ ಕಾರಣದಿಂದ ಆರೋಪಿಯು ಕೃತ್ಯದಲ್ಲಿ ತೊಡಗಿದ್ದ ಎಂದರು.