ಕುಖ್ಯಾತ ರೌಡಿ ಬೋಡ್ಕಾ ವಸೀಂ ಕೊಚ್ಚಿ ಕೊಲೆ

ಬೆಂಗಳೂರು,ಮಾ.೨೭- ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿ ಹತ್ತಕ್ಕೂ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಸೈಯದ್ ವಸೀಂ ಅಲಿಯಾಸ್ ಬೋಡ್ಕಾ ವಸೀಂನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಚಂದ್ರಾಲೇಔಟ್‌ನಲ್ಲಿ ನಡೆದಿದೆ.
ಸಿಗರೇಟ್ ಸೇದುವ ವಿಚಾರದಲ್ಲಿ ಗಂಗೊಂಡನಹಳ್ಳಿಯ ಮದೀನಾ ಮಸೀದಿ ಬಳಿ ನಿನ್ನೆ ರಾತ್ರಿ ೧೧.೧೫ರ ವೇಳೆ ನಡೆದ ಮಾರಾಮಾರಿಯಲ್ಲಿ ಗಂಗೊಂಡನಹಳ್ಳಿಯ ರೌಡಿ ಬೋಡ್ಕಾವಸೀಂನನ್ನು ಕೊಲೆ ಮಾಡಿ ಆತನ ಸ್ನೇಹಿತ ಅಬ್ದುಲ್ ಅಲಿಯಾಸ್ ಡಿಂಗ್ ಡಿಂಗ್‌ನನ್ನು ಮಾರಕಾಸ್ತ್ರಗಳಿಂದ ಹೊಡೆದು ತೀವ್ರತರಹದ ಹಲ್ಲೆ ನಡೆಸಲಾಗಿದೆ.
ಹಲ್ಲೆಗೊಳಗಾಗಿರುವ ಗಂಗೊಂಡನಹಳ್ಳಿಯ ಡಿಂಗ್ ಡಿಂಗ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಗಂಗೊಂಡನಹಳ್ಳಿ ಮಸೀದಿ ಬಳಿ ರಾತ್ರಿ ಸೈಯದ್ ಮುಬಾರಕ್‌ಗೆ ಪರಿಚಯಸ್ಥರಾದ ಹರ್ಭಾಜ್‌ಖಾನ್ ಹಾಗೂ ಸೈಫುಲ್ಲಾ ನಡುವೆ ಸಿಗರೇಟ್ ಸೇದುವ ವಿಚಾರದಲ್ಲಿ ಗಲಾಟೆ ನಡೆದಿದೆ. ಆಕ್ರೋಶಗೊಂಡ ಹರ್ಭಾಜ್‌ಖಾನ್ ತನ್ನ ಸ್ನೇಹಿತ ಡಿಂಗ್ ಡಿಂಗ್‌ಗೆ ವಿಷಯ ತಿಳಿಸಿದ್ದು, ಆತ ತನ್ನ ಸ್ನೇಹಿತ ಜುಬೇರ್‌ನೊಂದಿಗೆ ಕೊಲೆಯಾದ ಬೋಡ್ಕಾ ಮನೆ ಬಳಿ ಗಲಾಟೆ ಮಾಡಿರುವುದಾಗಿ ತಿಳಿಸಿದ್ದಾನೆ.
ಗಲಾಟೆ ವಿಚಾರವಾಗಿ ಸೈಫುಲ್ಲಾ ಜತೆ ಮಾತನಾಡುವಂತೆ ಮದೀನ ಮಸೀದಿ ಬಳಿಗೆ ಡಿಂಗ್ ಡಿಂಗ್‌ನನ್ನು ಕರೆದುಕೊಂಡು ಫೋನ್ ಮಾಡಿ ನಿನ್ನ ತಮ್ಮ ಹರ್ಭಾಜ್ ಜತೆ ಗಲಾಟೆ ಮಾಡಿರುವ ವಿಚಾರವನ್ನು ಮಾತನಾಡಲು ಮಸೀದಿ ಬಳಿ ಬರುವಂತೆ ಕರೆದಿದ್ದರು.
ಮಸೀದಿ ಬಳಿ ರಾತ್ರಿ ೧೧.೧೫ರ ವೇಳೆ ಮಾರಕಾಸ್ತ್ರಗಳೊಂದಿಗೆ ಬಂದ ಶೇಖ್ ಬರ್ಕತ್ ಅಲಿಯಾಸ್ ಬಬ್ಲು, ನ್ಯಾಮತ್, ಜಿಯಾವುಲ್ಲಾ, ಸೈಫುಲ್ಲಾ, ಜಿಯಾವುಲ್ಲಾ ಹಾಗೂ ಮೊಹ್ಮದ್ ಸೇರಿ ೬ ಮಂದಿ ಬೋಡ್ಕಾ ವಸೀಂ ಹಾಗೂ ಡಿಂಗ್ ಡಿಂಗ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬೋಡ್ಕಾ ವಸೀಂ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟರೆ,ಡಿಂಗ್ ಡಿಂಗ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಸಿದ ಚಂದ್ರಾ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ ಕೃತ್ಯವೆಸಗಿದ ೬ ಮಂದಿಗಾಗಿ ಶೋಧ ನಡೆಸಿದ್ದಾರೆ.
೧೦ ಪ್ರಕರಣ
ಕೊಲೆಯಾದ ಬೋಡ್ಕಾ ವಸೀಂ ಬ್ಯಾಟರಾಯನಪುರ, ಜೆಜೆ ನಗರದ ರೌಡಿ ಪಟ್ಟಿಂಯಲ್ಲಿದ್ದು, ೨ ಕೊಲೆ, ೩ ಕೊಲೆ ಬೆದರಿಕೆ, ಸುಲಿಗೆ, ಬೆದರಿಕೆ ಸೇರಿ ೧೦ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು,ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ, ಹಲವು ಬಾರಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದರೂ ಹಳೇ ಛಾಳಿ ಮುಂದುವರೆಸುತ್ತ ರೌಡಿ ಚಟುವಟಿಕೆಗಳನ್ನು ನಡೆಸಿ ಸ್ಥಳೀಯರಲ್ಲಿ ಭಯಭೀತಿ ಉಂಟು ಮಾಡುತ್ತಿದ್ದ ಎಂದು ತಿಳಿಸಿದರು. ಪ್ರಕರಣ ದಾಖಲಿಸಿರುವ ಇನ್ಸ್‌ಪೆಕ್ಟರ್ ಜೋಸೆಫ್ ಮ್ಯಾಥ್ಯು ಹೆಚ್ಚಿನ ತನಿಖೆ ಕೈಗೊಂಡಿದ್ದು, ಆರೋಪಿಗಳ ಸುಳಿವು ಪತ್ತೆ ಹಚ್ಚಲಾಗಿದ್ದು, ಸದ್ಯದಲ್ಲೇ ಬಂಧಿಸಲಿದ್ದಾರೆ ಎಂದು ಸಂಜೀವ್ ಪಾಟೀಲ್ ತಿಳಿಸಿದ್ದಾರೆ