ಕುಖ್ಯಾತ ರೌಡಿ ಕುಳ್ಳ ಶಿವ ಗಡೀಪಾರು

ಬೆಂಗಳೂರು,ಸೆ.೨-ಕೊಲೆ,ಕೊಲೆಯತ್ನ, ದರೋಡೆ,ಸುಲಿಗೆ ಸೇರಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ ಕುಖ್ಯಾತ ರೌಡಿ ಶಿವರಾಜ ಅಲಿಯಾಸ್ ಕುಳ್ಳ ಶಿವನನ್ನು ನಗರದಿಂದ ಗಡೀಪಾರು ಮಾಡಲಾಗಿದೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ರೌಡಿ ಆಸಾಮಿಯಾದ ಶಿವರಾಜ ಅಲಿಯಾಸ್ ಕುಳ್ಳ ಶಿವನನ್ನು ನಗರದಿಂದ ಗಡೀಪಾರು ಮಾಡಿ ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್. ಡಿ.ಶರಣಪ್ಪ ಅವರು ಆದೇಶ ಹೊರಡಿಸಿದ್ದಾರೆ.
ಕೊಲೆಯತ್ನ, ಕೊಲೆ,ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಳ್ಳ ಶಿವನ ವಿರುದ್ದ ಬ್ಯಾಡರಹಳ್ಳಿ, ತಾವರೆಕೆರೆ, ಮಾದನಾಯಕನಹಳ್ಳಿ, ಕುಂಬಳಗೂಡು ಪೊಲೀಸ್ ಠಾಣೆಗಳಲ್ಲಿ ೧೦ ಪ್ರಕರಣಗಳು ದಾಖಲಾಗಿರುತ್ತವೆ.
ಆರೋಪಿಯು ಪದೇ ಪದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದು, ಆತನ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಪೊಲೀಸ್ ಅಧಿನಿಯಮದ ಪ್ರಕಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿ.ಬಿ.ಎಂ.ಪಿ ವ್ಯಾಪ್ತಿಯ ಪ್ರದೇಶವನ್ನು ಪ್ರವೇಶಿಸದಂತೆ ತುಮಕೂರು ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.